ADVERTISEMENT

ಗುಣಮಟ್ಟದ ವಸ್ತುಗಳ ಉತ್ಪಾದನೆಗೆ ಗಮನವಿರಲಿ

ಸ್ತ್ರೀಶಕ್ತಿ ಗುಂಪುಗಳಿಗೆ ಸಚಿವೆ ಉಮಾಶ್ರೀ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2016, 19:43 IST
Last Updated 21 ಅಕ್ಟೋಬರ್ 2016, 19:43 IST

ಬೆಂಗಳೂರು: ‘ಮಹಿಳೆಯರು ತಾವು ಉತ್ಪಾದಿಸಿದ ವಸ್ತುಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಶುಕ್ರವಾರ ನಗರದ ಮಡಿವಾಳ ಸ್ತ್ರೀಶಕ್ತಿ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ  ‘ರಾಜ್ಯ ಮಟ್ಟದ ಸ್ತ್ರೀಶಕ್ತಿ ಸಂಘದ ಮಹಿಳೆಯರು ಹಾಗೂ ಮಹಿಳಾ ಉದ್ದಿಮೆದಾರರು ಉತ್ಪಾದಿಸಿದ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ’ ವನ್ನು ಉದ್ಘಾಟಿಸಿ ಮಾತನಾಡಿದರು.

‘ಸರ್ಕಾರ ಸ್ತ್ರೀಶಕ್ತಿ ಸಂಘಗಳಿಗೆ ಈ ಹಿಂದೆ ನೀಡಲಾಗುತ್ತಿದ್ದ ₹5 ಸಾವಿರದ ಸುತ್ತು ನಿಧಿಯನ್ನು 5ವರ್ಷದ ಅವಧಿಗೆ ವಿಸ್ತರಿಸಿ ಒಟ್ಟು ₹25 ಸಾವಿರದ ಸುತ್ತು ನಿಧಿಯನ್ನು ನೀಡಲಾಗುತ್ತಿದೆ. ಸಂಘಗಳಿಗೆ ಹಿಂದೆ ಶೇ 6 ರ ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದ, ₹1ಲಕ್ಷದ ಕಿರು ಸಾಲವನ್ನು ಪ್ರಸ್ತುತ  ಬಡ್ಡಿ ರಹಿತವಾಗಿ ₹2 ಲಕ್ಷಗಳಿಗೆ ಹೆಚ್ಚಿಸಲಾಗಿದೆ’ ಎಂದರು.

ADVERTISEMENT

‘ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರು ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸುವತ್ತ ಗಮನಹರಿಸಬೇಕು. ಸ್ತ್ರೀಶಕ್ತಿ ಒಕ್ಕೂಟಗಳನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸ್ಥಾಪಿಸಿ ಅಲ್ಲಿನ ಸದಸ್ಯರಿಗೆ ಇಂತಹ ಮೇಳಗಳ ಮೂಲಕ ಮಾರುಕಟ್ಟೆ ಸೌಲಭ್ಯ ಒದಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ’ ಎಂದರು.

‘ಮಹಿಳಾ ಆಯೋಗದ ಮೂಲಕ ಮಹಿಳಾ ಕಲ್ಯಾಣ ಸಮಿತಿಗಳನ್ನು ರಚಿಸಿ ಮಹಿಳೆಯರಿಗೆ ಅಗತ್ಯವಿರುವ ಕಾನೂನು ಹಾಗೂ ಪೊಲೀಸ್ ನೆರವನ್ನು ನೀಡಲು ಸೂಕ್ತ ಮಾರ್ಗಸೂಚಿಯನ್ನು  ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

* ಸ್ತ್ರೀಶಕ್ತಿ ಗುಂಪುಗಳು ಸ್ವಾವಲಂಬಿ ಬದುಕು ಕಂಡುಕೊಳ್ಳಬೇಕು ಎಂದು ಸರ್ಕಾರ ಜಾರಿಗೆ ತಂದಿರುವ ಸೌಲಭ್ಯ– ಯೋಜನೆಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು

–ಉಮಾಶ್ರೀ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.