ADVERTISEMENT

‘ಗೋಪಾಲಯ್ಯ ವಿರುದ್ಧ ವಿಚಾರಣೆ ನಿಲ್ಲದು’

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 19:50 IST
Last Updated 20 ಜನವರಿ 2017, 19:50 IST

ಬೆಂಗಳೂರು: ಜೆಡಿಎಸ್‌ ಶಾಸಕ ಗೋಪಾಲಯ್ಯ ಅವರು ಪಕ್ಷದ ಶಿಸ್ತು ಸಮಿತಿ ಮುಂದೆ ಕ್ಷಮಾಪಣೆ ಕೋರಿದ್ದರೂ ಸದಸ್ಯತ್ವದ ಅನರ್ಹತೆ ಕೋರಿ ವಿಧಾನಸಭಾಧ್ಯಕ್ಷರು ನಡೆಸುತ್ತಿರುವ ವಿಚಾರಣೆ ಮುಂದುವರಿಯಲಿದೆ.

ಕಳೆದ ಜೂನ್‌ನಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಗೋಪಾಲಯ್ಯ ಸೇರಿದಂತೆ ಎಂಟು ಶಾಸಕರ ಸದಸ್ಯತ್ವ ರದ್ದು ಮಾಡಬೇಕು ಎಂದು ಜೆಡಿಎಸ್‌ ಅರ್ಜಿ ಸಲ್ಲಿಸಿತ್ತು.  ಅರ್ಜಿ ವಿಚಾರಣೆ ಇನ್ನೂ  ಮುಗಿದಿಲ್ಲ. ಗೋಪಾಲಯ್ಯ ಅವರು ಪಕ್ಷದ ಮುಂದೆ ಕ್ಷಮೆ ಯಾಚಿಸಿ ಪತ್ರ ನೀಡಿದ್ದರೂ ವಿಚಾರಣೆ ನಿಲ್ಲುವುದಿಲ್ಲ ಎಂದು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಶುಕ್ರವಾರ ಸ್ಪಷ್ಟಪಡಿಸಿದರು.

ಒಂದು ವೇಳೆ ಅರ್ಜಿದಾರರು ವಿಚಾರಣೆ ನಿಲ್ಲಿಸುವಂತೆ ಮನವಿ ಮಾಡಿದರೆ ಮಾತ್ರ ವಿಚಾರಣೆ ನಿಲ್ಲಿಸಲಾಗುವುದು. ಆದರೆ, ಗೋಪಾಲಯ್ಯ  ಹೆಸರನ್ನು ಮಾತ್ರ ಬಿಟ್ಟು ಉಳಿದವರ ವಿಚಾರಣೆ ಮುಂದುವರಿಸಲು ಆಗದು. ವಿಚಾರಣೆ ಕೈ ಬಿಡುವುದಿದ್ದರೆ ಎಲ್ಲರ ವಿಚಾರಣೆಯೂ ಕೈಬಿಡಬೇಕಾಗುತ್ತದೆ ಎಂದರು. ಗೋಪಾಲಯ್ಯ ಶುಕ್ರವಾರ ಜೆಡಿಎಸ್‌ ಶಿಸ್ತು ಸಮಿತಿ ಮುಂದೆ ಹಾಜರಾಗಿ ಕ್ಷಮಾಪಣೆ ಪತ್ರ ಸಲ್ಲಿಸಿದರು. ‘ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಬಗ್ಗೆ ವಿಷಾದಿಸುತ್ತೇನೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.