ADVERTISEMENT

ಗೋಸೇವಕರ ಸಂಘಟನೆಗೆ ‘ಗೋಕಿಂಕರ ಯಾತ್ರೆ’

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 19:40 IST
Last Updated 29 ಆಗಸ್ಟ್ 2016, 19:40 IST

ಬೆಂಗಳೂರು: ದೇಶದಾದ್ಯಂತ ಗೋಸೇವಕರನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆ. 16ರಿಂದ ಗೋಕಿಂಕರ ಯಾತ್ರೆ ಆರಂಭಿಸುವುದಾಗಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಕಟಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೆ.16ರಿಂದ ಪ್ರಾರಂಭವಾಗುವ ಈ ಯಾತ್ರೆ ನ. 7ಕ್ಕೆ ಮುಕ್ತಾಯವಾಗಲಿದೆ. ಒಟ್ಟು 80 ದಿನ ಕರ್ನಾಟಕದ 224 ತಾಲ್ಲೂಕುಗಳು ಸೇರಿದಂತೆ ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಆಯ್ದ ಪ್ರದೇಶಗಳಿಗೂ ಈ ಯಾತ್ರೆ ಭೇಟಿ ನೀಡಲಿದೆ’ ಎಂದು ಹೇಳಿದರು.

‘ಹೈಬ್ರೀಡ್‌ ತಳಿಗಳ ಬಳಕೆಯನ್ನು ನಿಲ್ಲಿಸಿ, ದೇಸಿ ತಳಿಗಳನ್ನು ಹೆಚ್ಚು ಹೆಚ್ಚು ಬಳಸುವ ಬಗ್ಗೆ ಕುರಿತು ಈ ಯಾತ್ರೆಯಲ್ಲಿ ಪ್ರೋತ್ಸಾಹಿಸಲಾಗುವುದು. ಮಲೆನಾಡುಗಿಡ್ಡ, ಕಾಸರಗೋಡು ತಳಿ, ಬರಗೂರು, ಪುಂಗನೂರು, ಹಳ್ಳಿಕಾಡು, ಓಂಗೋಲ್‌,  ಅಮೃತಮಹಲ್‌, ಖಿಲಾರಿ, ಕೃಷ್ಣತೀರ, ಜವಾರಿ, ದೇವನಿ ಇಂತಹ 11 ಭಾರತೀಯ ತಳಿಗಳ ಮೂಲಸ್ಥಾನಗಳಲ್ಲಿ ಯಾತ್ರೆ ಸಂಚರಿಸಲಿದೆ’ ಎಂದು ವಿವರಿಸಿದರು.

‘ಒಟ್ಟು 5 ರಥಗಳು ಯಾತ್ರೆ ಮಾಡಲಿವೆ. ಬೆಂಗಳೂರಿನ ದೊಡ್ಡ ಬಸವನಗುಡಿ ದೇವಸ್ಥಾನ, ಮಹಾರಾಷ್ಟ್ರದ ಪಾಂಡವಪುರ, ಆಂಧ್ರಪ್ರದೇಶದ ಮಂತ್ರಾಲಯ, ಗೋವಾದ ರಾಮನಾಥಿ, ಕೇರಳದ ಮದ್ದೂರಿನಿಂದ ಒಂದೊಂದು ರಥಗಳು ಸಂಚಾರ ಪ್ರಾರಂಭಿಸಲಿವೆ.

ಮಂಗಲಗೋಯಾತ್ರೆ: ಗೋಕಿಂಕರ ಯಾತ್ರೆ ಮುಗಿಯುತ್ತಿದ್ದ ಹಾಗೆ ನ. 8ರಿಂದ ಗೋವಿಗಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರ ಮಂಗಲಪಾಂಡೆ ಪ್ರೇರಣೆಯಲ್ಲಿ ‘ಮಂಗಲಗೋಯಾತ್ರೆ’ ಪ್ರಾರಂಭವಾಗಲಿದೆ.

ರಾಮಚಂದ್ರಾಪುರ ಮಠದಲ್ಲಿದ್ದ ಮಹಾನಂದಿಯ ನೆನಪಿಗಾಗಿ ಅದರ ಆಕಾರದಲ್ಲಿ ಒಂದು ಬೃಹತ್‌ ರಥ ನಿರ್ಮಿಸಲಾಗಿದ್ದು, ಅದು ಯಾತ್ರೆ ಕೈಗೊಳ್ಳಲಿದೆ. ಅದರೊಟ್ಟಿಗೆ ಪರಿಸರ ರಥ, ವಿಜ್ಞಾನ ರಥ, ಆರೋಗ್ಯ ರಥ ಹೀಗೆ ಗೋವಿನೊಂದಿಗೆ ನಂಟು ಹೊಂದಿರುವ ಒಟ್ಟು 10 ರಥಗಳು ಯಾತ್ರೆ ನಡೆಸಲಿವೆ.

‘ಗೋತಳಿಯ ಸಂರಕ್ಷಣೆಯ ಮಹಾ ಅಭಿಯಾನ ಇದಾಗಿದೆ. ಯಾತ್ರೆ ಮೂಲಕ ಶಾಲಾ ಮಕ್ಕಳಲ್ಲಿ ಗೋವಿನ ಅರಿವು ಮೂಡಿಸುವುದು ಮುಖ್ಯ ಉದ್ದೇಶ. ಚರ್ಚೆ, ಕಮ್ಮಟಗಳನ್ನು ಏರ್ಪಡಿಸಿ ನಿರ್ಣಯಗಳನ್ನು ಮಂಡಿಸಲಾಗುವುದು’ ಎಂದು ಸ್ವಾಮೀಜಿ ಹೇಳಿದರು.

‘ಈ ಯಾತ್ರೆ, ಐದು ರಾಜ್ಯಗಳ ಒಟ್ಟು 78 ಪ್ರದೇಶಗಳಲ್ಲಿ ಸಂಚರಿಸಲಿದೆ. ಎಂಟು ಪ್ರದೇಶಗಳಲ್ಲಿ ಗೋಮೇಳಗಳನ್ನು ಹಮ್ಮಿಕೊಳ್ಳಲಾಗುವುದು. ನಂತರ ಯಾತ್ರೆ ಮಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ  ಎಂದರು.

***
ನಕಲಿ ಗೋರಕ್ಷಕರು ಹೇಳುವ ಹಸುವನ್ನು ರಕ್ಷಿಸುವ ಅಂಶವನ್ನು ಮಾತ್ರ ಒಪ್ಪಲು ಸಾಧ್ಯ. ಹಿಂಸೆ ಯಾವುದಕ್ಕೂ ಪರಿಹಾರವಲ್ಲ. ಒಳ್ಳೆಯ ರೀತಿಯಲ್ಲಿ ಗೋರಕ್ಷಣೆ ಆಗಬೇಕು.
-ರಾಘವೇಶ್ವರ ಭಾರತೀ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.