ADVERTISEMENT

ಚಾಕು ತೋರಿಸಿ ₨ 5.50 ಲಕ್ಷ ದರೋಡೆ

ಸಂಚಾರ ಪೊಲೀಸರನ್ನು ಕಂಡು ಬೈಕ್‌ ಬಿಟ್ಟು ಪರಾರಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 20:04 IST
Last Updated 1 ಸೆಪ್ಟೆಂಬರ್ 2014, 20:04 IST

ಬೆಂಗಳೂರು: ಖಾಸಗಿ ಕಂಪೆನಿ ಉದ್ಯೋಗಿ ಉಮೇಶ್‌ ಎಂಬವರಿಗೆ ಚಾಕುವಿನಿಂದ ಇರಿದು ಹಣ ದೋಚಿ ಪರಾರಿ­ಯಾಗುತ್ತಿದ್ದ ದರೋಡೆಕೋರರು, ಸಂಚಾರ ಪೊಲೀಸರನ್ನು ಕಂಡು ಬೈಕ್‌ ಬಿಟ್ಟು ಓಡಿ ಹೋಗಿರುವ ಘಟನೆ ಕೋರಮಂಗಲದಲ್ಲಿ ಸೋಮವಾರ ನಡೆದಿದೆ.

ಮಾರತ್‌ಹಳ್ಳಿ ನಿವಾಸಿಯಾದ ಉಮೇಶ್‌, ಬ್ರಿಂಕ್ಸ್‌ ಆರ್ಯ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯ ಉದ್ಯೋಗಿ. ಅವರಿಗೆ ಮೊಬೈಲ್‌ ಸೇವಾ ಕಂಪೆನಿಯೊಂದರ ಪೋಸ್ಟ್‌ ಪೇಯ್ಡ್‌ ಶುಲ್ಕ ಸಂಗ್ರಹಿಸುವ ಕೆಲಸ ವಹಿಸಲಾಗಿತ್ತು. ಉಮೇಶ್‌ ಇಂದಿರಾನಗರ ಸುತ್ತಮುತ್ತ ಗ್ರಾಹಕರಿಂದ ₨ 5.50 ಲಕ್ಷ ಶುಲ್ಕ ಸಂಗ್ರಹಿಸಿಕೊಂಡು ಬೈಕ್‌ನಲ್ಲಿ ಸಂಜೆ ಕೋರ­ಮಂಗಲ 80 ಅಡಿ ರಸ್ತೆಗೆ ಬಂದಿದ್ದರು.

ಆಗ ಮೂರು ಮಂದಿ ದುಷ್ಕರ್ಮಿಗಳು ಮತ್ತೊಂದು ಬೈಕ್‌ನಲ್ಲಿ ಅವರನ್ನು ಹಿಂಬಾ­ಲಿಸಿ ಬಂದು ಹಣವಿದ್ದ ಬ್ಯಾಗ್‌ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಉಮೇಶ್‌ ಪ್ರತಿರೋಧ ತೋರಿದ್ದ­ರಿಂದ ದುಷ್ಕರ್ಮಿಗಳು ಅವರಿಗೆ ಚಾಕುವಿನಿಂದ ಇರಿದು ಹಣದ ಬ್ಯಾಗ್‌ ಕಿತ್ತುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ನಂತರ ಉಮೇಶ್‌ ನೆರವಿಗಾಗಿ ಕೂಗಿಕೊಂಡಿದ್ದಾರೆ. ಅವರ ಚೀರಾಟ ಕೇಳಿದ ಸ್ಥಳೀಯರು ದರೋಡೆಕೋರರನ್ನು ಹಿಡಿ­ಯಲು ಮುಂದಾದಾಗ ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಸ್ಥಳೀಯರು ಬೈಕ್‌ನಲ್ಲಿ ಅವರನ್ನು ಸುಮಾರು ಒಂದೂವರೆ ಕಿ.ಮೀ ಬೆನ್ನಟ್ಟಿದ್ದಾರೆ.

ಈ ಸಂದರ್ಭದಲ್ಲಿ ಕೋರಮಂಗಲ 80 ಅಡಿ ರಸ್ತೆಯ ಐಶ್ವರ್ಯ ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆಡು­ಗೋಡಿ ಸಂಚಾರ ಠಾಣೆ ಹೆಡ್‌ ಕಾನ್‌ಸ್ಟೆಬಲ್‌ ರಾಮಯ್ಯ ಅವರು ಸಂಚಾರ ನಿಯಮ ಉಲ್ಲಂಘಿಸಿ (ಬೈಕ್‌ನಲ್ಲಿ ಮೂರು ಮಂದಿ ಪ್ರಯಾಣಿಸುವುದು) ಬರುತ್ತಿದ್ದ ದರೋಡೆಕೋರರ ಬೈಕನ್ನು ತಡೆಯಲು ಮುಂದಾಗಿದ್ದಾರೆ.

ಇದರಿಂದ ಗಾಬರಿಯಾದ ಆರೋಪಿಗಳು ಸ್ಥಳದಲ್ಲೇ ಬೈಕ್‌ ಬಿಟ್ಟು ಹಣದೊಂದಿಗೆ ಓಡಿ ಹೋಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಮೇಶ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೈಕ್‌ನ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಗಿದೆ. ಸದ್ಯದಲ್ಲೇ ಅವರನ್ನು ಬಂಧಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೋರಮಂಗಲ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.