ADVERTISEMENT

ಚಿಂದಿ ಆಯುವರ ವೇಷದಲ್ಲಿ ಮನೆಗಳವು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 19:30 IST
Last Updated 18 ಏಪ್ರಿಲ್ 2018, 19:30 IST

ಬೆಂಗಳೂರು: ಚಿಂದಿ ಆಯುವರ ವೇಷದಲ್ಲಿ ಸುತ್ತಾಡಿ ಮನೆಗಳವು ಮಾಡುತ್ತಿದ್ದ ಆರೋಪದಡಿ ಅಜ್ಮೀರ್‌ ಗ್ಯಾಂಗ್‌ನ ಸದಸ್ಯರಿಬ್ಬರನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

ರಾಮಸಿಂಹ್‌ (19) ಹಾಗೂ ರೋಕಿ (19) ಬಂಧಿತರು. ಇವರಿಬ್ಬರು ಸಹೋದರರು. ಯಲಹಂಕ ನ್ಯಾಯಾಂಗ ಬಡಾವಣೆಯ ನಿವಾಸಿ ಪೂರ್ಣಿಮಾ ಶ್ರೀನಾಥ್ ಎಂಬುವರ ಮನೆಯಲ್ಲಿ ಇವರು ಕಳ್ಳತನ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದರು.

ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರಿದ್ದ ತಂಡವು ನಗರಕ್ಕೆ ಬಂದು ರೈಲು ಹಾಗೂ ಬಸ್‌ ನಿಲ್ದಾಣ ಸಮೀಪದಲ್ಲಿ ಚಿಂದಿ ಆಯುವವರಂತೆ ಓಡಾಡುತ್ತಿದ್ದರು. ಕೆಲ ದಿನಗಳ ಬಳಿಕ, ನಗರದ ಹಲವು ಪ್ರದೇಶಗಳಲ್ಲಿ ಸುತ್ತಾಡಿ ಬೀಗ ಹಾಕಿರುತ್ತಿದ್ದ ಮನೆಗಳನ್ನು ಗುರುತಿಸಿ ಕೃತ್ಯ ಎಸಗುತ್ತಿದ್ದರು ಎಂದರು.

ADVERTISEMENT

ಆರೋಪಿಗಳು ಹಗಲಿನಲ್ಲೇ ಮನೆಯ ಬೀಗ ಮುರಿದು ಒಳನುಗ್ಗುತ್ತಿದ್ದರು. ಚಿನ್ನಾಭರಣ ದೋಚಿಕೊಂಡು ಪರಾರಿಯಾಗುತ್ತಿದ್ದರು. ಚನ್ನಪಟ್ಟಣದಲ್ಲಿ ಕಳೆದ ತಿಂಗಳು ಮನೆಯೊಂದರಲ್ಲಿ ಕಳವು ಮಾಡುತ್ತಿದ್ದ ವೇಳೆಯಲ್ಲೇ ಸಾರ್ವಜನಿಕರು, ರಾಮಸಿಂಹ್‌ ಹಾಗೂ ರೋಕಿಯನ್ನು ಹಿಡಿದು ಸ್ಥಳೀಯ ಠಾಣೆಗೆ ಒಪ್ಪಿಸಿದ್ದರು.

ಬಾಡಿ ವಾರಂಟ್ ಮೇಲೆ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದೇವೆ. ನಮ್ಮ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಡಿ ₹15 ಲಕ್ಷ ಮೌಲ್ಯದ ಚಿನ್ನದ ಆಭರಣಗಳನ್ನು ಜಪ್ತಿ ಮಾಡಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.