ADVERTISEMENT

ಚೇತರಿಕೆ ಕಂಡ ಅರ್ಥ ವ್ಯವಸ್ಥೆ: ಡಿವಿಎಸ್‌

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2014, 19:47 IST
Last Updated 30 ಆಗಸ್ಟ್ 2014, 19:47 IST

ಬೆಂಗಳೂರು: ‘ಈ ಹಿಂದೆ ಹಳಿತಪ್ಪಿದ್ದ ದೇಶದ ಆರ್ಥಿಕ ವ್ಯವಸ್ಥೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರದ 100 ದಿನಗಳ ಆಡಳಿತದಲ್ಲಿ  ಚೇತರಿಕೆ ಕಂಡಿದೆ. ಇದು ಜಿಡಿಪಿ ವೃದ್ಧಿ ದರದಲ್ಲಿ ಪ್ರತಿಫಲನವಾಗು­ತ್ತಿದೆ’ ಎಂದು ರೈಲ್ವೆ ಸಚಿವ ಡಿ.ವಿ.ಸದಾ­ನಂದಗೌಡ ಅವರು ಹೇಳಿದರು.

ನಗರದಲ್ಲಿ ಶನಿವಾರ ನಡೆದ ಭಾರತೀಯ ಕಂಪೆನಿ ಕಾರ್ಯದರ್ಶಿಗಳ ಸಂಸ್ಥೆಯ (ಐಸಿಎಸ್‌ಸಿ) ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬಿಜೆಪಿ ಆಡಳಿತದ ಮೊದಲ ತ್ರೈಮಾಸಿಕ­ದಲ್ಲಿ ಜಿಡಿಪಿ ದರವು ಶೇ 5.7ರಷ್ಟು ಏರಿಕೆ ಕಂಡಿದೆ. ಇದು ಹದಗೆಟ್ಟ ಆರ್ಥಿಕ ಸ್ಥಿತಿಯು ಚೇತರಿಸಿ­ಕೊಂಡಿರುವುದನ್ನು ತೋರಿಸುತ್ತದೆ. ಇದೀಗ ದೇಶದ ಜನತೆ ಮತ್ತು ಮಾಧ್ಯಮ­ಗಳು ಸರ್ಕಾರದ ಆಡಳಿತ­ವನ್ನು ಪರಾಮರ್ಶಿಸಬೇಕು’ ಎಂದು ತಿಳಿಸಿದರು.

‘ಕೇಂದ್ರವು ಐಸಿಎಸ್‌ಸಿಗೆ ಅಗತ್ಯವಾದ ಎಲ್ಲ ರೀತಿಯ ನೆರವು ನೀಡಲಿದೆ. ಕಂಪೆನಿ ಕಾರ್ಯದರ್ಶಿಗಳು ‘ಕಾನೂನು ಮತ್ತು ನೈತಿಕ ದಿಕ್ಸೂಚಿ’ಯಾಗಿ ಕಾರ್ಪೋರೇಟ್‌ ಸಂಸ್ಥೆಗಳಿಗೆ ಮಾತ್ರವಲ್ಲ ಸಮಾಜ ಮತ್ತು ದೇಶಕ್ಕೆ ಕೂಡ ಸೇವೆ ಸಲ್ಲಿಸಬೇಕು’ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾ­ಚಲಯ್ಯ’ ಐಸಿಎಸ್‌ಸಿ ಕೇಂದ್ರ ಪರಿಷತ್ತಿನ ಸದಸ್ಯ ಗೋಪಾಲ­ಕೃಷ್ಣ ಹೆಗಡೆ ಮತ್ತಿತ­ರರು ಕಾರ್ಯ­ಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.