ADVERTISEMENT

ಜನಪ್ರತಿನಿಧಿಗಳಿಗೆ 25ರಂದು ಪ್ರಾತ್ಯಕ್ಷಿಕೆ

ಉಕ್ಕಿನ ಸೇತುವೆ ಬಗ್ಗೆ ಗೊಂದಲ ನಿವಾರಣೆ: ಸಚಿವ ಜಾರ್ಜ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2016, 19:34 IST
Last Updated 22 ಅಕ್ಟೋಬರ್ 2016, 19:34 IST
ಜನಪ್ರತಿನಿಧಿಗಳಿಗೆ 25ರಂದು ಪ್ರಾತ್ಯಕ್ಷಿಕೆ
ಜನಪ್ರತಿನಿಧಿಗಳಿಗೆ 25ರಂದು ಪ್ರಾತ್ಯಕ್ಷಿಕೆ   

ಬೆಂಗಳೂರು: ಉಕ್ಕಿನ ಸೇತುವೆ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಲು ನಗರದ ಶಾಸಕರು, ವಿಧಾನ ಪರಿಷತ್‌ ಸದಸ್ಯರಿಗೆ ಇದೇ 25ರಂದು ಪವರ್ ಪಾಯಿಂಟ್‌ ಪ್ರೆಸೆಂಟೇಷನ್‌ ಏರ್ಪಡಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಹೇಳಿದರು.

ಅಂದು ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ಆಯ್ದ ಸಂಘ ಸಂಸ್ಥೆಗಳು, ಪರಿಸರವಾದಿಗಳನ್ನೂ ಆಹ್ವಾನಿಸಲಾಗುವುದು ಎಂದು ಶನಿವಾರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮತ್ತು ಶಾಸಕರಾದ ಎಸ್‌.ಆರ್‌. ವಿಶ್ವನಾಥ್‌ ಹಾಗೂ ಕೆ.ವೈ. ನಾರಾಯಣಸ್ವಾಮಿ ಅವರನ್ನು ಇಂದು ಭೇಟಿ ಮಾಡಿ ಉಕ್ಕಿನ ಸೇತುವೆ ಬಗ್ಗೆ  ಇದ್ದ ಗೊಂದಲಗಳು ಮತ್ತು ವಾಸ್ತವಿಕ ಅಂಶಗಳ ಮನವರಿಕೆ ಮಾಡಿಕೊಟ್ಟಿದ್ದೇನೆ. ಸದಾನಂದಗೌಡರು ನೀಡಿದ ಸಲಹೆ ಮೇರೆಗೆ ಎಲ್ಲ ಜನಪ್ರತಿನಿಧಿಗಳನ್ನೂ ಕರೆದು ಮಾಹಿತಿ ಒದಗಿಸಲು ತೀರ್ಮಾನಿಸಲಾಗಿದೆ’ ಎಂದರು.

ADVERTISEMENT

ಸೇತುವೆ ಯೋಜನಾ ವೆಚ್ಚ ₹1,350 ಕೋಟಿಯಿಂದ ₹1,800 ಕೋಟಿ ಆಗಿದ್ದು ಹೇಗೆ? ಎಷ್ಟು ಮರ ಕಡಿಯಬೇಕಾಗುತ್ತದೆ? ಪರ್ಯಾಯವಾಗಿ ಎಲ್ಲಿ ಗಿಡಗಳನ್ನು ಬೆಳೆಸಲಾಗುವುದು? ಎಂಬಂತಹ ಹಲವಾರು ಪ್ರಶ್ನೆಗಳಿಗೆ ಅಂದು ಉತ್ತರಿಸಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಯೋಜನೆ ಜಾರಿಗೊಳಿಸಲಾಗುವುದು ಎಂದು ಜಾರ್ಜ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.