ADVERTISEMENT

ಜನಾಭಿಪ್ರಾಯ ಸಂಗ್ರಹಕ್ಕೆ ಚಾಲನೆ

ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯಿಂದ ‘ಚುಕುಬುಕು’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 19:54 IST
Last Updated 4 ಡಿಸೆಂಬರ್ 2016, 19:54 IST
ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯ ಸ್ವಯಂಸೇವಕರು ಬಸವನಗುಡಿಯ ನ್ಯಾಷನಲ್‌ ಕಾಲೇಜು ಬಳಿ ಜನಾಭಿಪ್ರಾಯ ಸಂಗ್ರಹಿಸಿದರು
ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯ ಸ್ವಯಂಸೇವಕರು ಬಸವನಗುಡಿಯ ನ್ಯಾಷನಲ್‌ ಕಾಲೇಜು ಬಳಿ ಜನಾಭಿಪ್ರಾಯ ಸಂಗ್ರಹಿಸಿದರು   

ಬೆಂಗಳೂರು: ‘ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಉಪನಗರ ರೈಲು ಬೇಕು’ ಎಂದು ಒತ್ತಾಯಿಸಿ ಆಂದೋಲನ ಆರಂಭಿಸಿರುವ ‘ಸಿಟಿಜನ್ಸ್‌ ಫಾರ್‌ ಬೆಂಗಳೂರು’ (ಸಿಎಫ್‌ಬಿ) ಸಂಘಟನೆ, ಈ ಕುರಿತು ಜನಾಭಿಪ್ರಾಯ ಸಂಗ್ರಹಿಸುವ  ಕಾರ್ಯವನ್ನು ಆರಂಭಿಸಿದೆ.

ಸಂಘಟನೆಯ ಸ್ವಯಂಸೇವಕರು ನಗರದ ಬಸವನಗುಡಿಯ ನ್ಯಾಷನಲ್‌ ಕಾಲೇಜು ಆವರಣದಲ್ಲಿ ಶನಿವಾರ ಜನಾಭಿಪ್ರಾಯ ಸಂಗ್ರಹಿಸಿದರು. ತರಗತಿಗಳಿಗೆ ತೆರಳಿ ಪ್ರಯಾಣಿಕರ ರೈಲು ಸೇವೆಯಿಂದ ಆಗುವ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.  

‘ಕಾಲೇಜಿಗೆ ಬರಲು  ಯಾವ ಸಾರಿಗೆಯನ್ನು ಬಳಸುತ್ತೀರಿ ಎಂದು  ಸ್ವಯಂಸೇವಕರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ಹೆಚ್ಚಿನವರು ಬಸ್‌, ಕಾರು ಹಾಗೂ ದ್ವಿಚಕ್ರ ವಾಹನ ಬಳಸುವುದಾಗಿ ತಿಳಿಸಿದರು. ಒಂದು ವೇಳೆ ರೈಲಿನ ಮೂಲಕ ಕಾಲೇಜು ತಲುಪಲು ಸಾಧ್ಯವಾದರೆ ಅದರಿಂದ ಆಗುವ ಇಂಧನ ಉಳಿತಾಯ, ಪ್ರಯಾಣ ವೆಚ್ಚದ ಉಳಿತಾಯ, ಟ್ರಾಫಿಕ್‌ ಜಾಮ್‌ ಕಿರಿಕಿರಿ ತಪ್ಪುವುದರಿಂದ ಆಗುವ ಸಮಯ ಉಳಿತಾಯದ ಬಗ್ಗೆ  ಸ್ವಯಂಸೇವಕರು ವಿವರಿಸಿದರು.  ಬಳಿಕ, ವಿದ್ಯಾರ್ಥಿಗಳೂ ರೈಲು ಬಳಕೆ ಹೆಚ್ಚಿಸಬೇಕು ಎಂಬ ಬೇಡಿಕೆಗೆ ಸಹಮತ ವ್ಯಕ್ತಪಡಿಸಿದರು’ ಎಂದು ಸಿಎಫ್‌ಬಿಯ ಶ್ರೀನಿವಾಸ್‌ ಅಲವಿಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ದೇಶದ ಮುಂಬೈ, ಚೆನ್ನೈ, ಪುಣೆ, ಹೈದರಾಬಾದ್‌ನಂತಹ ಮಹಾನಗರಗಳಲ್ಲಿ ಪ್ರಯಾಣಿಕ ರೈಲನ್ನು ವ್ಯಾಪಕವಾಗಿ ಬಳಸಲಾಗುತ್ತದೆ.   ನಗರದ ವ್ಯಾಪ್ತಿಯಲ್ಲಿ ಒಟ್ಟು 40ಕ್ಕೂ ಅಧಿಕ ರೈಲು ನಿಲ್ದಾಣಗಳಿವೆ. ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ವ್ಯಾಪ್ತಿಯಲ್ಲಿ 200 ಕಿಲೊ ಮೀಟರ್‌ಗೂ ಹೆಚ್ಚು ಉದ್ದದ ರೈಲು ಮಾರ್ಗ ಇದೆ. ಆದರೆ, ಬೆಂಗಳೂರಿನವರಿಗೆ ರೈಲು   ಬಳಕೆಯ ಮಹತ್ವದ ಅರಿವಿಲ್ಲ.   ಮಲ್ಲೇಶ್ವರದಿಂದ ವೈಟ್‌ಫೀಲ್ಡ್‌ಗೆ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯ ಎಂದು ಅಲ್ಲಿನ ನಿವಾಸಿಗಳಿಗೇ ತಿಳಿದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾವು ಉಕ್ಕಿನ ಸೇತುವೆ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಿದ ಮಾದರಿಯಲ್ಲೇ ಪ್ರಯಾಣಿಕ ರೈಲು ಸೇವೆ ಹೆಚ್ಚಿಸುವ ಬಗ್ಗೆಯೂ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಭಾನುವಾರವೂ ಕೆಲವೆಡೆ ನಮ್ಮ ಕಾರ್ಯಕರ್ತರು ಜನರನ್ನು ಭೇಟಿಯಾಗಿದ್ದಾರೆ. ನಾವು  ಇದುವರೆಗೆ ಸುಮಾರು 800ಕ್ಕೂ ಹೆಚ್ಚು ಮಂದಿಯ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಈ ಬಾರಿ ವಿದ್ಯಾರ್ಥಿ ಸಮುದಾಯವನ್ನೇ  ಹೆಚ್ಚಾಗಿ ಸಂಪರ್ಕಿಸಲಿದ್ದೇವೆ. ಅವರ ಅಭಿಪ್ರಾಯಗಳನ್ನು  ಕ್ರೋಡೀಕರಿಸಿ ನೈರುತ್ಯ ರೈಲ್ವೆ ಅಧಿಕಾರಿಗಳಿಗಳಿಗೆ ಸಲ್ಲಿಸುತ್ತೇವೆ’ ಎಂದು ಅವರು ತಿಳಿಸಿದರು.

ADVERTISEMENT

ತಾರಾ ಕೃಷ್ಣಸ್ವಾಮಿ,  ಸುಜಿತ್‌ ದೇಶಪಾಂಡೆ, ಮಾನಸಿ ಕುಮಾರ್‌, ಜಯಲಕ್ಷ್ಮೀ, ದೀಪ್ತಿ ನಾಗೇಂದ್ರ, ಕಿರಣ್‌  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.