ADVERTISEMENT

ಜಾತಿ ವ್ಯವಸ್ಥೆಯಿಂದ ಹಕ್ಕುಗಳ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2015, 20:00 IST
Last Updated 28 ಜನವರಿ 2015, 20:00 IST

ಬೆಂಗಳೂರು: ‘ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿರುವ ಜಾತಿ ವ್ಯವಸ್ಥೆಯೇ ಅತಿ ದೊಡ್ಡ ಮಾನವ ಹಕ್ಕುಗಳ ಉಲ್ಲಂಘನೆ­ಯಾಗಿದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‌ ಗುಂಡೂರಾವ್‌ ಅವರು ಅಭಿಪ್ರಾಯಪಟ್ಟರು.

ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆಯ ರಾಜ್ಯ ಘಟಕ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಮಾನವ ಹಕ್ಕುಗಳ ರಾಜ್ಯ ಸಮಾವೇಶ’ದಲ್ಲಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.

‘ಇಂದು ವಿದ್ಯಾವಂತರೇ ಜಾತಿ, ಪ್ರಾಂತ್ಯ, ವರ್ಗ, ವರ್ಣ ಆಧಾರದ ಮೇಲೆ ಅತಿಯಾಗಿ ತಾರತಮ್ಯ ಮಾಡುತ್ತಿದ್ದಾರೆ. ಆದ್ದರಿಂದ, ನಾವು ಆತ್ಮವಿಮರ್ಶೆ ಮಾಡಿಕೊಳ್ಳುವ ಜತೆಗೆ ಜಾತಿ ವ್ಯವಸ್ಥೆ ವಿರುದ್ಧ ಸಂಘಟಿತ ಹೋರಾಟ ರೂಪಿಸುವ ಅಗತ್ಯವಿದೆ’ ಎಂದು ಹೇಳಿದರು.

ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ.ಹುನಗುಂದ ಮಾತನಾಡಿ, ‘ಎಲ್ಲೆಡೆ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಕಾಣುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮಾನವೀಕರಣ ಕಣ್ಮರೆಯಾಗುತ್ತಿದೆ’ ಎಂದು ವಿಷಾದಿಸಿದರು.

ಸಮಾರಂಭದಲ್ಲಿ ಮಾನವ ಹಕ್ಕುಗಳ ಕುರಿತಾದ ‘ಅರಿವು’ ಕಿರುಚಿತ್ರದ ಸಿ.ಡಿ ಬಿಡುಗಡೆ ಮಾಡಲಾಯಿತು.

ವಿಧಾನ ಪರಿಷತ್ತಿನ ಸದಸ್ಯರಾದ  ಸದಸ್ಯ ವೀರಣ್ಣ ಮತ್ತಿಕಟ್ಟಿ, ಆರ್.ವಿ.ವೆಂಕಟೇಶ್‌, ಎಚ್‌.ಎಂ.ರೇವಣ್ಣ, ಕಾಂಗ್ರೆಸ್‌ ಮುಖಂಡ ನೆ.ಲ.ನರೇಂದ್ರ ಬಾಬು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಉಮೇಶ್‌ ಆರಾಧ್ಯ, ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಡಾ.ಮೋಹನ್‌ರಾವ್‌ ನಲವಡೆ  ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.