ADVERTISEMENT

ಜೀತಮುಕ್ತ ರಾಜ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ

ಜೀತದಾಳುಗಳಿಗೆ ಪುನರ್ವಸತಿ ಕಲ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 19:34 IST
Last Updated 16 ಫೆಬ್ರುವರಿ 2017, 19:34 IST
ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ವತಿಯಿಂದ  ನಗರದ ಪುರಭವನ ಎದುರು  ಬುಧವಾರ ಪ್ರತಿಭಟನೆ ನಡೆಸಲಾಯಿತು
ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ವತಿಯಿಂದ ನಗರದ ಪುರಭವನ ಎದುರು  ಬುಧವಾರ ಪ್ರತಿಭಟನೆ ನಡೆಸಲಾಯಿತು   
ಬೆಂಗಳೂರು: ‘ಜೀತದಾಳುಗಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಿ, ಕರ್ನಾಟಕವನ್ನು ಜೀತಮುಕ್ತ ರಾಜ್ಯವನ್ನಾಗಿ ಮಾಡಬೇಕು’ ಎಂದು ಒತ್ತಾಯಿಸಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.‌
 
ರಾಜ್ಯದ ಹಲವು ಜಿಲ್ಲೆಗಳಿಂದ ಬಂದಿದ್ದ ಪ್ರತಿಭಟನಾಕಾರರು, ಪುರಭವನದ ಎದುರು ಸೇರಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ಬಳಿಕ ಅಲ್ಲಿಂದ ಮೆರವಣಿಗೆಯಲ್ಲಿ ಹೊರಟು ಸ್ವಾತಂತ್ರ್ಯ ಉದ್ಯಾನದಲ್ಲಿ ಬಹಿರಂಗ ಸಭೆ ಮಾಡಿದರು.
 
‘2016ರಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ಗುರುತಿಸಲಾಗಿದ್ದ 3,119 ಜೀತ ವಿಮುಕ್ತರಿಗೆ ಇದುವರೆಗೂ ಪುನರ್ವಸತಿ ಕಲ್ಪಿಸಿಲ್ಲ. ಹೊಸದಾಗಿ 12,997 ಜೀತದಾಳುಗಳು ಸಹ ವಿಮುಕ್ತಿ ಬಯಸಿ ಅರ್ಜಿ ಸಲ್ಲಿಸಿದ್ದು, ಅವರಿಗೂ ಪುನರ್ವಸತಿ ಸಿಕ್ಕಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.
 
‘ಕೇಂದ್ರ ಸರ್ಕಾರದ ನಿಯಮಗಳಂತೆ  ಪುನರ್ವಸತಿ ಸೌಲಭ್ಯ ಕಲ್ಪಿಸಬೇಕು. ಮಾಸಾಶನ ಮೊತ್ತವನ್ನು ₹3 ಸಾವಿರಕ್ಕೆ ಹೆಚ್ಚಿಸಬೇಕು. ಜೀತದಾಳು ಕುಟುಂಬಕ್ಕೆ ತಲಾ 5 ಎಕರೆ ಜಮೀನು ಕೊಡಬೇಕು. ಇದಕ್ಕಾಗಿ ಮುಂಬರುವ ರಾಜ್ಯ ಮುಂಗಡಪತ್ರದಲ್ಲಿ ಸೂಕ್ತ ಅನುದಾನ ನೀಡಬೇಕು’ ಎಂದು ಅವರು ಒತ್ತಾಯಿಸಿದರು.
 
‘ಉತ್ತರ ಕರ್ನಾಟಕದ 15 ಜಿಲ್ಲೆಗಳಲ್ಲಿ ಬಿಟ್ಟಿ ಚಾಕರಿ ಪದ್ಧತಿ ಹಾಗೂ ಕೊಡಗು ಜಿಲ್ಲೆಯಲ್ಲಿ ಬೊಟ್‌ ಪದ್ಧತಿ ಜಾರಿಯಲ್ಲಿದೆ. ಅಂಥ ಪದ್ಧತಿಯಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಮುಕ್ತಿ ಕೊಡಿಸಬೇಕು. ಜತೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.