ADVERTISEMENT

ಜೆಡಿಎಸ್‌ ಮೈತ್ರಿ ನಿರ್ಧಾರ ಆಗಿಲ್ಲ: ರಾಮಲಿಂಗಾರೆಡ್ಡಿ

ಬಿಬಿಎಂಪಿ: ದೇವೇಗೌಡರು ಷರತ್ತು ವಿಧಿಸಿಲ್ಲ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:34 IST
Last Updated 3 ಸೆಪ್ಟೆಂಬರ್ 2015, 19:34 IST

ಬೆಂಗಳೂರು: ‘ಬಿಬಿಎಂಪಿ ವಿಭಜನೆ ಮಾಡದಂತೆ ಎಚ್‌.ಡಿ.ದೇವೇಗೌಡ ಅವರು ಷರತ್ತು ವಿಧಿಸಿಲ್ಲ. ಅಲ್ಲದೆ, ಮೇಯರ್‌ ಚುನಾವಣೆಯಲ್ಲಿ ಜೆಡಿಎಸ್‌ ಜತೆಗಿನ ಮೈತ್ರಿ ವಿಷಯವಾಗಿ ಇನ್ನೂ ಯಾವುದೇ ಅಂತಿಮ ತೀರ್ಮಾನ ಆಗಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಮ್ಮ ಪಕ್ಷ ಬೆಂಗಳೂರು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ಜೊತೆ ಕೈಜೋಡಿಸಲು ಮುಂದಾಗಿದೆ. ಈ ವಿಚಾರದಲ್ಲಿ ಮಾತುಕತೆ ನಡೆದಿದೆ’ ಎಂದರು.

‘ಪಕ್ಷದ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ಅವರು ದೇವೇಗೌಡರ ಜೊತೆ ಈಗಾಗಲೇ ಮಾತನಾಡಿದ್ದಾರೆ. ಜೆಡಿಎಸ್‌ನಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬರುವ ನಿರೀಕ್ಷೆ ಇದೆ’ ಎಂದು ಹೇಳಿದರು.

‘ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಮೈತ್ರಿ ಮುಂದುವರಿಯುವುದೇ’ ಎಂಬ ಪ್ರಶ್ನೆಗೆ, ‘ಜೆಡಿಎಸ್‌ ಜೊತೆ ಮೈತ್ರಿ ಕೇವಲ ಬಿಬಿಎಂಪಿಗೆ ಮಾತ್ರ ಸಂಬಂಧಿಸಿದೆ’ ಎಂದು ಉತ್ತರಿಸಿದರು.

ನಡೆಯದ ಮಾತುಕತೆ: ಮೈತ್ರಿ ಕುರಿತು ಪರಮೇಶ್ವರ್‌ ಮತ್ತು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ನಡುವೆ ಗುರುವಾರ ಯಾವುದೇ ಮಾತುಕತೆ ನಡೆಯಲಿಲ್ಲ. ಪರಮೇಶ್ವರ್ ಬೆಂಗಳೂರಿನಲ್ಲಿ ಇರಲಿಲ್ಲ. ಕುಮಾರಸ್ವಾಮಿ ಅವರು ಅನಾರೋಗ್ಯದ ಕಾರಣ ಯಾರನ್ನೂ ಭೇಟಿ ಮಾಡಲಿಲ್ಲ. ಹಾಗಾಗಿ, ಮಾತುಕತೆ ನಡೆಯಲಿಲ್ಲ ಎಂದು ಗೊತ್ತಾಗಿದೆ. ಈ ನಡುವೆ ಕುಮಾರಸ್ವಾಮಿ ಅವರು ದೇವೇ ಗೌಡರ ಜತೆ ಮಾತುಕತೆ ನಡೆಸಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.