ADVERTISEMENT

ಟೋಲ್‌ ಶುಲ್ಕ ಇಳಿಕೆಗೆ ಕೇಂದ್ರದ ಜತೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 20:06 IST
Last Updated 24 ಜುಲೈ 2014, 20:06 IST

ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ದುಬಾರಿ ರಸ್ತೆ ಬಳಕೆ ಶುಲ್ಕ (ಟೋಲ್‌) ಸಂಗ್ರಹಿಸುತ್ತಿರುವ ಸಂಬಂಧ ಕೇಂದ್ರ ಭೂಸಾರಿಗೆ ಸಚಿವಾಲಯದ ಜತೆಗೂ ಮಾತುಕತೆ ನಡೆಸಲಾಗುವುದು ಎಂದು ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಗುರುವಾರ ವಿಧಾನಸಭೆಗೆ ತಿಳಿಸಿದರು.

ತಮ್ಮ ಇಲಾಖೆಯ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ಜೆಡಿಎಸ್‌ನ ಪಿಳ್ಳ ಮುನಿಶಾಮಪ್ಪ ಅವರು ‘ನಮ್ಮ ಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ದುಬಾರಿ ಶುಲ್ಕ ಸಂಗ್ರಹಿಸುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕು’ ಎಂದು ಆಗ್ರಹಪಡಿಸಿದರು.

‘ಈ ವಿಷಯ ಕುರಿತು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಜತೆಗೂ ಮಾತನಾಡಿದ್ದೇನೆ. ಅವರು ಕೂಡ ರಸ್ತೆ ಶುಲ್ಕ ಸಂಗ್ರಹಿಸುವ ವ್ಯವಸ್ಥೆಯನ್ನು ಪುನರ್‌­ಪರಿಶೀಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದರು.

‘ಮುಂದಿನ ದಿನಗಳಲ್ಲಿ ಟೋಲ್‌ ರಸ್ತೆ ನಿರ್ಮಿಸುವಾಗ ಅದರ ಪಕ್ಕದಲ್ಲಿ ಸರ್ವೀಸ್‌ ರಸ್ತೆ ನಿರ್ಮಿಸಬೇಕೆನ್ನುವ ಷರತ್ತು ವಿಧಿಸಲಾಗುವುದು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.