ADVERTISEMENT

ಠಾಣೆಯಲ್ಲಿ ನಡೆದ ಸಂಭಾಷಣೆಯ ಸಿ.ಡಿ ಬಹಿರಂಗ

ಮಗನನ್ನು ಕ್ಷಮಿಸಿ: ಪ್ರದೀಪ್ ತಂದೆ ಮನವಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2014, 19:59 IST
Last Updated 26 ಆಗಸ್ಟ್ 2014, 19:59 IST

ಬೆಂಗಳೂರು: ಕೆಂಪೇಗೌಡನಗರ ಪೊಲೀಸರು ಪ್ರದೀಪ್‌ ಅವರನ್ನು ವಶಕ್ಕೆ ತೆಗೆದುಕೊಂಡ ನಂತರ ಠಾಣೆಗೆ ಬಂದಿದ್ದ ತಂದೆ ಈರಣ್ಣ, ಮಗನ ವಿರುದ್ಧ ದೂರು ದಾಖಲಿಸದಂತೆ ಮನವಿ ಮಾಡಿದ್ದ ದೃಶ್ಯಾವಳಿಯನ್ನು ಒಳಗೊಂಡ ಸಿ.ಡಿ ಮಾಧ್ಯಮಗಳಿಗೆ ಲಭ್ಯವಾಗಿದೆ.

ದೂರು ನೀಡಿದ್ದ ದಂಪತಿ ಮತ್ತು ಈರಣ್ಣ ಅವರ ನಡುವೆ ಠಾಣೆಯಲ್ಲಿ ಸುಮಾರು ನಾಲ್ಕೈದು ನಿಮಿಷ ಸಂಧಾನ ಮಾತುಕತೆ ನಡೆಸಿ, ಹೇಳಿಕೆ ದಾಖಲಿಸಿಕೊಂಡಿದ್ದನ್ನು ಇನ್‌ಸ್ಪೆಕ್ಟರ್‌ ನಾಗರಾಜ್‌ ಅವರು ಸಿಬ್ಬಂದಿಯಿಂದ  ಚಿತ್ರೀಕರಣ ಮಾಡಿಸಿದ್ದರು.

ಸಿ.ಡಿಯಲ್ಲಿರುವ ಸಂಭಾಷಣೆ: ‘ಬಾಡಿಗೆಗಿದ್ದ ದಂಪತಿಯ ಜತೆ ಜಗಳವಾಡಿದ್ದ ಮಗ, ನನಗೆ ಕರೆ ಮಾಡಿ ಮನೆ ಖಾಲಿ ಮಾಡಿಸುವಂತೆ ಕೂಗಾಡಿದ್ದ. ಅಲ್ಲದೇ, ದಂಪತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಮದ್ಯವ್ಯಸನಿಯಾದ ಆತ ಮನೆಯನ್ನೇ ಬಾರ್‌ ಮಾಡಿಕೊಂಡಿದ್ದ. ಮದ್ಯದ ಬಾಟಲಿಗಳನ್ನು ಮನೆಯ ತುಂಬೆಲ್ಲಾ ಎಸೆಯುತ್ತಿದ್ದ ಆತ, ಆ ಬಗ್ಗೆ ಪ್ರಶ್ನಿಸಿದರೆ ನನ್ನೊಂದಿಗೂ ಜಗಳವಾಡುತ್ತಿದ್ದ. ಈ ಕಾರಣಕ್ಕಾಗಿ ನಾನು ಪ್ರತ್ಯೇಕವಾಗಿ ವಾಸವಾಗಿದ್ದೇನೆ’ ಎಂದು ಈರಣ್ಣ ಅವರು ಸಂಧಾನದ ವೇಳೆ ಹೇಳಿಕೆ ಕೊಟ್ಟಿದ್ದರು.

ಮುಂಗಡ ಹಣವನ್ನು ವಾಪಸ್‌ ಕೊಡಿಸಿದರೆ ಮನೆ ಖಾಲಿ ಮಾಡುವುದಾಗಿ ದಂಪತಿ ನಾಗರಾಜ್‌ ಅವರ ಬಳಿ ಹೇಳಿದ್ದರು. ಆಗ ಈರಣ್ಣ ಅವರು, ‘ಈ ಹಿಂದೆ ಬಾಡಿಗೆಗೆ ಇದ್ದವರಿಗೆ ಹಣ ಕೊಟ್ಟಿದ್ದೇನೆ. ಆದ್ದರಿಂದ ಈಗಲೇ ಮುಂಗಡ ಹಣ ವಾಪಸ್‌ ಕೊಡಲು ಕಷ್ಟವಾಗುತ್ತದೆ’ ಎಂದು ಪ್ರತಿಕ್ರಿಯಿಸಿದ್ದರು.

ನಂತರ ನಾಗರಾಜ್‌, ‘ಲಿಖಿತ ದೂರು ಕೊಡಿ. ಪ್ರಕರಣ ದಾಖಲಿಸುತ್ತೇನೆ’ ಎಂದು ದಂಪತಿಗೆ ಸೂಚಿಸಿದ್ದರು. ಆಗ ಈರಣ್ಣ, ‘ಮಗ ಹಾಳಾಗಿದ್ದಾನೆ ಎಂದು ಗೊತ್ತಿದೆ. ಇದೊಂದು ಬಾರಿ ಪ್ರಕರಣ ದಾಖಲಿಸದೆ ಆತನನ್ನು ಬಿಟ್ಟು ಬಿಡಿ. ನಂತರವೂ ಬುದ್ದಿ ಕಲಿಯ
ದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ’ ಎಂದು ಮನವಿ ಮಾಡಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT