ADVERTISEMENT

ಡಿಜಿಪಿ ಓಂಪ್ರಕಾಶ್‌, ಎಡಿಜಿಪಿ ಕಮಲ್‌ಪಂತ್ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 19:51 IST
Last Updated 7 ಜುಲೈ 2015, 19:51 IST

ಬೆಂಗಳೂರು: ‘ಲೋಕಾಯುಕ್ತ ಸಂಸ್ಥೆ ಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ತನಿಖಾ ವಿಚಾರದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್‌ ಹಾಗೂ ಎಡಿಜಿಪಿ ಕಮಲ್‌ಪಂತ್ ಅವರಿಂದ ಕರ್ತವ್ಯ ಲೋಪವಾಗಿದೆ’ ಎಂದು ಆರೋಪಿಸಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಎನ್. ವಿಜಯ್‌ಕುಮಾರ್ ಅವರು ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಮಂಗಳವಾರ ದೂರು ಕೊಟ್ಟಿದ್ದಾರೆ.

‘ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಸಲುವಾಗಿ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ‘ರಾಜ್ಯ ಭದ್ರತಾ ಆಯೋಗ’ ರಚಿಸಲಾಗಿದೆ. ಓಂಪ್ರಕಾಶ್ ಈ ಆಯೋಗದ ಸದಸ್ಯ ಕಾರ್ಯದರ್ಶಿ ಯಾಗಿದ್ದಾರೆ. ಮಹತ್ವದ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಯಾವುದೇ ನಿರ್ಣಯ ತೆಗೆದುಕೊಳ್ಳುವುದಾದರೂ ಮೊದಲು ಆಯೋಗದ ವತಿಯಿಂದ ಸಭೆ ನಡೆಯಬೇಕು. ಎಲ್ಲ ಸದಸ್ಯರು ಚರ್ಚೆ ನಡೆಸಿ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕು.  ಆದರೆ, ಭ್ರಷ್ಟಾಚಾರ ಪ್ರಕರಣಕ್ಕೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಾಗ ಈ ನಿಯಮ ಗಳನ್ನು ಉಲ್ಲಂಘಿಸಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಆಯೋಗದ ಸದಸ್ಯ ಕಾರ್ಯದರ್ಶಿ ಆಗಿರುವ ಓಂಪ್ರಕಾಶ್, ಎಸ್‌ಐಟಿ ರಚನೆ ಪ್ರಕ್ರಿಯೆ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಬೇಕಿತ್ತು. ಈ ವಿಚಾರದಲ್ಲಿ ಅವರಿಂದ ಕರ್ತವ್ಯ ಲೋಪವಾಗಿದೆ. ತರಾ ತುರಿಯಲ್ಲಿ ಎಸ್‌ಐಟಿ ರಚನೆಯಾಗಿದೆ’ ಎಂದು ದೂರಿನಲ್ಲಿ ಹೇಳಿದ್ದಾರೆ.

‘ಇನ್ನು ಲೋಕಾಯುಕ್ತರು ಸೋಮ ವಾರ ಸಂಜೆ ತಮ್ಮ ಕಚೇರಿಯಿಂದ ಮಾಧ್ಯಮಗಳು ಹಾಗೂ ಪೊಲೀಸರ ಮುಂದೆಯೇ ರಾಜಾರೋಷವಾಗಿ ಐದು ಬ್ಯಾಗ್‌ಗಳಲ್ಲಿ ಕಡತಗಳನ್ನು ತೆಗೆದು ಕೊಂಡು ಹೋಗಿದ್ದಾರೆ. ಇದರಿಂದ ಸಾಕ್ಷ್ಯ ನಾಶಕ್ಕೆ ಅವಕಾಶ ನೀಡಿದಂತಾ ಗಿದ್ದು, ತನಿಖೆ ಮೇಲೆ ಅನುಮಾನ ಉಂಟು ಮಾಡಿದೆ. ಹೀಗಾಗಿ ಎಸ್‌ಐಟಿ ಮುಖ್ಯಸ್ಥ ಕಮಲ್‌ಪಂತ್ ಅವರ ವಿರುದ್ಧವೂ ಕ್ರಮ ಜರುಗಿಸಬೇಕು’ ಎಂದು ವಿಜಯ್‌ ಕುಮಾರ್ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.