ADVERTISEMENT

ಡಿ. 1ರಿಂದ ಜಾರಿ: ರಾತ್ರಿ 11ರ ತನಕ ವಿಸ್ತರಣೆ

ಮೆಟ್ರೊ: ನಾಗಸಂದ್ರ– ಸಂಪಿಗೆ ರಸ್ತೆ ಮಾರ್ಗದಲ್ಲಿ ಬೆಳಿಗ್ಗೆ 5ರಿಂದಲೇ ಸಂಚಾರ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2015, 20:10 IST
Last Updated 24 ನವೆಂಬರ್ 2015, 20:10 IST

ಬೆಂಗಳೂರು: ಸಂಪಿಗೆ ರಸ್ತೆ ಮತ್ತು ನಾಗಸಂದ್ರ (ಹೆಸರಘಟ್ಟ ಕ್ರಾಸ್‌) ನಡುವಣ 13 ಕಿ.ಮೀ ಉದ್ದದ ಮಾರ್ಗದಲ್ಲಿ ಡಿ. 1ರಿಂದ ಬೆಳಿಗ್ಗೆ 5ರಿಂದಲೇ ಸಂಚಾರ ಆರಂಭಿಸುವ ಮೆಟ್ರೊ ರೈಲುಗಳು ರಾತ್ರಿ 11ರವರೆಗೆ ಓಡಾಡಲಿವೆ. ಸದ್ಯ ಈ ಮಾರ್ಗದಲ್ಲಿ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಮಾತ್ರ ರೈಲು ಸಂಚಾರ ನಡೆದಿದೆ.

ಕೈಗಾರಿಕೆಗಳ ಸಂಘ ಮತ್ತು ಪ್ರಯಾಣಿಕರ ಮನವಿ ಮೇರೆಗೆ ರೈಲು ಸಂಚಾರ ಅವಧಿಯನ್ನು ಎರಡು ಗಂಟೆಗಳಷ್ಟು ವಿಸ್ತರಿಸಲಾಗುತ್ತಿದೆ.
ಎರಡು ತಿಂಗಳ ಅವಧಿವರೆಗೆ ಪ್ರಾಯೋಗಿಕವಾಗಿ ಈ ವೇಳಾ ಪಟ್ಟಿ ಜಾರಿಯಲ್ಲಿರುತ್ತದೆ. ಯಶಸ್ಸು ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಪ್ರಕಟಣೆ ತಿಳಿಸಿದೆ.

ಈ ಮಾರ್ಗದಲ್ಲಿ ಬೆಳಿಗ್ಗೆ 5ರಿಂದ 8ರವರೆಗೆ ಮತ್ತು ರಾತ್ರಿ 8ರಿಂದ 11ರವರೆಗೆ ಪ್ರತಿ 15 ನಿಮಿಷಗಳಿಗೆ ಒಂದರಂತೆ ಹಾಗೂ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಪ್ರತಿ 10 ನಿಮಿಷಗಳಿಗೆ ಒಂದರಂತೆ ರೈಲು ಸಂಚಾರ ಇರಲಿದೆ.

ಒಂದು ಗಂಟೆ ಕಡಿತ: ಇನ್ನೊಂದೆಡೆ ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ನಡುವಣ ಮಾರ್ಗದಲ್ಲಿ ಈ ತಿಂಗಳ 28ರವರೆಗೆ ಬೆಳಿಗ್ಗೆ 8ರಿಂದ ರಾತ್ರಿ 7ರವರೆಗೆ ಮಾತ್ರ ರೈಲು ಸಂಚಾರ ಇರಲಿದೆ. ಸುರಂಗ ಮಾರ್ಗದಲ್ಲಿ ನಡೆದಿರುವ ಪರೀಕ್ಷಾರ್ಥ ಸಂಚಾರಕ್ಕಾಗಿ ಈ ಮಾರ್ಗದಲ್ಲಿ ರಾತ್ರಿ 7ರಿಂದ 8ರವರೆಗಿನ ಒಂದು ಗಂಟೆ ಸಂಚಾರವನ್ನು ಕಡಿತಗೊಳಿಸಲಾಗಿದೆ.
*
ಸುರಂಗ: ಕೆಲಸ ಆರಂಭಿಸಿದ ‘ಕಾವೇರಿ’
ಬೆಂಗಳೂರು:
ಸುರಂಗ ಕೊರೆಯುವ ಯಂತ್ರ (ಟಿಬಿಎಂ) ‘ಕಾವೇರಿ’ಯು ಚಿಕ್ಕಪೇಟೆಯಿಂದ ಮೆಜೆಸ್ಟಿಕ್‌ ಕಡೆಗೆ   ಸುರಂಗ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದೆ. ಚಿಕ್ಕಪೇಟೆ ಕಡೆಯಿಂದ ಮೆಜೆಸ್ಟಿಕ್‌ ಕಡೆಗಿನ ಜೋಡಿ ಸುರಂಗ ಮಾರ್ಗದ ಒಟ್ಟು ಉದ್ದ 744 ಮೀಟರುಗಳು.

ಈ ಮಾರ್ಗದಲ್ಲಿ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿರುವ ‘ಕೃಷ್ಣಾ’, ಇದುವರೆಗೆ 526.5 ಮೀಟರುಗಳಷ್ಟು ಉದ್ದದ ಸುರಂಗವನ್ನು ನಿರ್ಮಿಸಿದೆ. ಮೆಜೆಸ್ಟಿಕ್‌ನಿಂದ ಸಂಪಿಗೆ ರಸ್ತೆವರೆಗೆ ಜೋಡಿ ಸುರಂಗ ಮಾರ್ಗದ ಒಟ್ಟು ಉದ್ದ 957  ಮೀಟರ್‌ಗಳು. ಇದರಲ್ಲಿ ಒಂದು ಸುರಂಗದ ನಿರ್ಮಾಣ ಕಾರ್ಯವನ್ನು ‘ಮಾರ್ಗರೀಟಾ’ ಯಂತ್ರವು ಈಗಾಗಲೇ ಪೂರ್ಣಗೊಳಿಸಿದೆ.

ಮಾರ್ಗದ ಎರಡನೇ ಸುರಂಗವನ್ನು ನಿರ್ಮಿಸುತ್ತಿರುವ  ‘ಗೋದಾವರಿ’ ಯಂತ್ರವು ಇದುವರೆಗೆ  427.5  ಮೀಟರುಗಳಷ್ಟು ಸುರಂಗ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ ಎಂದು ನಿಗಮದ ವಕ್ತಾರ ಯು.ವಿ.ವಸಂತರಾವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT