ADVERTISEMENT

ತಂಬಾಕು ಲಾಬಿಯಲ್ಲಿ ಕರ್ನಾಟಕ ಹೈಕೋರ್ಟ್‌

ಸಿಗರೇಟು ಕಂಪೆನಿಗಳಿಗೆ ದಾಳ: ಮಧ್ಯಂತರ ಅರ್ಜಿಯಲ್ಲಿ ರವಿಕೃಷ್ಣಾರೆಡ್ಡಿ ಆರೋಪ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 19:48 IST
Last Updated 2 ಮಾರ್ಚ್ 2017, 19:48 IST
ತಂಬಾಕು ಲಾಬಿಯಲ್ಲಿ ಕರ್ನಾಟಕ ಹೈಕೋರ್ಟ್‌
ತಂಬಾಕು ಲಾಬಿಯಲ್ಲಿ ಕರ್ನಾಟಕ ಹೈಕೋರ್ಟ್‌   
ಬೆಂಗಳೂರು: ‘ತಂಬಾಕು ಉತ್ಪನ್ನಗಳ ಮೇಲೆ ಎಚ್ಚರಿಕೆ ಸಂದೇಶವನ್ನು ಎಷ್ಟು ಪ್ರಮಾಣದಲ್ಲಿ ಮುದ್ರಿಸಬೇಕು ಎಂಬ ತಕರಾರಿನಲ್ಲಿ ಸಿಗರೇಟು ಕಂಪೆನಿಗಳು ಕರ್ನಾಟಕ ಹೈಕೋರ್ಟ್‌ ಅನ್ನು ದಾಳವಾಗಿ ಬಳಸಿಕೊಳ್ಳುತ್ತಿವೆ’ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಆರೋಪಿಸಿದ್ದಾರೆ.
 
ಈ ಸಂಬಂಧ ರವಿಕೃಷ್ಣಾರೆಡ್ಡಿ ಅವರು, ಸುಪ್ರಿಂ ಕೋರ್ಟ್ ವಕೀಲ ದೀಪಕ್‌ ಖೋಸ್ಲಾ ಮುಖಾಂತರ ತಂಬಾಕು ವಿವಾದದ ಪ್ರಕರಣಗಳಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.
 
ಆದರೆ,  ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಒಟ್ಟು 43 ಅರ್ಜಿಗಳಲ್ಲಿ 42 ಅರ್ಜಿಗಳ ವಿಚಾರಣೆಯನ್ನು ರವಿ ಕೃಷ್ಣಾರೆಡ್ಡಿ ಮಧ್ಯಂತರ ಅರ್ಜಿ ಸಲ್ಲಿಸಿದ ದಿನವೇ ಪೂರೈಸಿದ್ದು, ಆದೇಶ ಕಾಯ್ದಿರಿಸಿದ ಕಾರಣ ಈ ಮಧ್ಯಂತರ ಅರ್ಜಿ ತೆರೆಗೆ ಸರಿದಿದೆ.
ತಂಬಾಕು ವಿವಾದದ ವಿವಿಧ ಹೈಕೋರ್ಟ್‌ಗಳಲ್ಲಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಕರ್ನಾಟಕ ಹೈಕೋರ್ಟ್‌ ಕಳೆದ ವರ್ಷದ ಮೇ ತಿಂಗಳಿನಿಂದ ವಿಚಾರಣೆ ನಡೆಸುತ್ತಿದೆ.
 
ನ್ಯಾಯಪೀಠದ ಮುಂದೆ ಒಟ್ಟು 43 ಅರ್ಜಿಗಳಿದ್ದು ಇವುಗಳಲ್ಲಿ ಸದ್ಯ ಜೈಪುರ ನಿವಾಸಿ ರಾಹುಲ್‌ ಜೋಷಿ ಎಂಬುವರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮಾತ್ರವೇ ಬಾಕಿ ಉಳಿದಿದೆ.
 
ರಾಹುಲ್‌ ಜೋಷಿ ವಾದಗಳೇನು?
- ಬೀಡಿ ಮತ್ತು ಸಿಗರೇಟು ಪ್ಯಾಕ್‌ಗಳ ಹೊದಿಕೆಯ ಮೇಲೆ ತಂಬಾಕು ಸೇವನೆಯ ಕುರಿತು ಜಾಗೃತಿ ಮೂಡಿಸುವ   ಎಚ್ಚರಿಕೆಯ ಚಿತ್ರ ಸಂದೇಶವನ್ನು ಶೇ 85ರಷ್ಟು ಪ್ರಮಾಣದಲ್ಲಿ ಮುದ್ರಿಸಬೇಕು ಎಂಬ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.
- ಸಿಗರೇಟುಗಳನ್ನು ಬಿಡಿಬಿಡಿಯಾಗಿ ಮಾರಾಟ ಮಾಡುವುದನ್ನು ತಡೆಯಬೇಕು.
- ತಂಬಾಕು ನಿಯಂತ್ರಣಕ್ಕೆ  ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಘಟನೆಗಳ ಸಮ್ಮೇಳನದ ಒಪ್ಪಂದಕ್ಕೆ ಭಾರತವೂ ಬದ್ಧವಾಗಿದೆ. ಭಾರತ ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರವಾಗಿ ರುವುದರಿಂದ  ಈ ನಿರ್ಣಯ ಪಾಲಿಸುವುದು ಕಡ್ಡಾಯ.
ಸಿಗರೇಟು ಮತ್ತು ತಂಬಾಕು ಸಾಮಗ್ರಿಗಳು (ಜಾಹೀರಾತು ಮತ್ತು ನಮೂದನೆ) ನಿಯಂತ್ರಣ ಅಧಿನಿಯಮ–2014 ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂಬ ಕೇಂದ್ರ ಸರ್ಕಾರದ ಆದೇಶ 2016ರ ಏಪ್ರಿಲ್‌ 1ರಿಂದ ಜಾರಿಗೆ ಬಂದಿದೆ.
ಆದರೆ, ‘ಈ ನಿಯಮದಿಂದ ಬೀಡಿ ಮತ್ತು ಸಿಗರೇಟು ಉದ್ಯಮಕ್ಕೆ ಧಕ್ಕೆ ಉಂಟಾಗಲಿದೆ. ಸಾವಿರಾರು ಕಾರ್ಮಿಕರು ಬೀದಿ ಪಾಲಾಗಲಿದ್ದಾರೆ’ ಎಂದು ಆಕ್ಷೇಪಿಸಿ ಬೀಡಿ, ಸಿಗರೇಟು, ತಂಬಾಕು ಉತ್ಪನ್ನಗಳ ಕಂಪೆನಿಗಳು ಹೈಕೋರ್ಟ್‌ ಮೆಟ್ಟಿಲೇರಿವೆ.
 
ರವಿಕೃಷ್ಣಾರೆಡ್ಡಿ ಆರೋಪಗಳೇನು?
- ಐಟಿಸಿ ಲಿಮಿಟೆಡ್‌, ಗಾಡ್‌ ಫ್ರೇ ಫಿಲಿಪ್ಸ್‌ ಇಂಡಿಯಾ ಲಿಮಿಟೆಡ್‌, ವಿಎಸ್‌ಟಿ ಇಂಡಸ್ಟ್ರಿಸ್ ಲಿಮಿಟೆಡ್‌, ಘೋದಾವತ್ ಇಂಡಸ್ಟ್ರೀಸ್ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಭಾರತೀಯ ತಂಬಾಕು ಮಂಡಳಿ ಪಾಲಿಗೆ ಕರ್ನಾಟಕ ಹೈಕೋರ್ಟ್‌ ಸ್ವರ್ಗ ಎನಿಸಿದೆ.
- ಇವರೆಲ್ಲರೂ ತಮ್ಮ ಉದ್ಯಮದ ಉಳಿವಿಗಾಗಿ ಅತ್ಯಂತ ಮೋಸಗಾರಿಕೆ ಮಾರ್ಗದಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.
- ಇದರ ಹಿಂದೆ ಠಕ್ಕತನವಿದೆ. ನಾವುಗಳೆಲ್ಲಾ ಇಲ್ಲೇ ಏಕೆ ಅರ್ಜಿ ಗುಜರಾಯಿಸಿದ್ದೇವೆ ಎಂಬುದಕ್ಕೆ ಇವರು ಜುಜುಬಿ ಸಮರ್ಥನೆ ನೀಡಿದ್ದಾರೆ.
- ಜನರನ್ನು ಕಾಪಾಡಬೇಕಾದ ಕಾಯ್ದೆಯ ಹಿಂದಿನ ರಾಷ್ಟ್ರೀಯ ಹಿತಾಸಕ್ತಿಯನ್ನು ಕಡೆಗಣಿಸಲಾಗುತ್ತಿದೆ.
 
* ತಂಬಾಕು ದುಷ್ಪರಿಣಾಮ ಕುರಿತು ವಾದ ಆಲಿಸಲು ಹೈಕೋರ್ಟ್‌ ಸಿದ್ಧವಿಲ್ಲದಿರುವುದು ದುರದೃಷ್ಟಕರ. ಆದ್ದರಿಂದ ನ್ಯಾಯಪೀಠ ಬದಲಾಗಬೇಕು
ಕೆ.ವಿ.ಧನಂಜಯ, ಅರ್ಜಿದಾರರ ಪರ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.