ADVERTISEMENT

ತನಿಖೆಯಲ್ಲಿ ಹಸ್ತಕ್ಷೇಪ ಯಡಿಯೂರಪ್ಪ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 19:42 IST
Last Updated 22 ಜುಲೈ 2017, 19:42 IST
ತನಿಖೆಯಲ್ಲಿ ಹಸ್ತಕ್ಷೇಪ ಯಡಿಯೂರಪ್ಪ ವಿರುದ್ಧ ದೂರು
ತನಿಖೆಯಲ್ಲಿ ಹಸ್ತಕ್ಷೇಪ ಯಡಿಯೂರಪ್ಪ ವಿರುದ್ಧ ದೂರು   

ಬೆಂಗಳೂರು:  ‘ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ (ಪಿ.ಎ) ವಿನಯ್ ಅಪಹರಣ ಯತ್ನ, ಹಲ್ಲೆ ಪ್ರಕರಣದ ತನಿಖೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ವಕೀಲ ಎನ್‌.ಪಿ.ಅಮೃತೇಶ್‌, ನಗರ ಪೊಲೀಸ್ ಕಮಿಷನರ್‌ ಪ್ರವೀಣ್‌ ಸೂದ್‌ ಅವರಿಗೆ ಶನಿವಾರ ದೂರು ಸಲ್ಲಿಸಿದ್ದಾರೆ.

‘ಪ್ರಕರಣ ಸಂಬಂಧ ಮಹಾಲಕ್ಷ್ಮಿ ಲೇಔಟ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಯಡಿಯೂರಪ್ಪ ಅವರ ಆಪ್ತ ಸಹಾಯಕ ಹಾಗೂ ಸಂಬಂಧಿ ಎನ್‌.ಆರ್‌.ಸಂತೋಷ್‌  ಮೇಲೆ ಪೊಲೀಸರ ಅನುಮಾನವಿದೆ. ಅದೇ ಕಾರಣಕ್ಕೆ ಪೊಲೀಸರು, ಯಡಿಯೂರಪ್ಪ ಮನೆಯಲ್ಲಿ ಇತ್ತೀಚೆಗೆ ಶೋಧ ನಡೆಸಿದ್ದರು’

‘ಅದರ ಮರುದಿನವೇ ಯಡಿಯೂರಪ್ಪ, ನಿಮಗೆ (ಕಮಿಷನರ್‌) ಪತ್ರ ಬರೆದು ಶೋಧ ನಡೆಸಿದ್ದನ್ನು ಖಂಡಿಸಿದ್ದರು. ಜತೆಗೆ ಸಂತೋಷ್‌ ಅಮಾಯಕ. ರಾಜಕೀಯ ಲಾಭಕ್ಕಾಗಿ ಕೆಲವರು ಅವರನ್ನು ಪ್ರಕರಣದಲ್ಲಿ ಸಿಲುಕಿಸುತ್ತಿದ್ದಾರೆಂದು ಹೇಳಿದ್ದರು’ ಎಂದು ದೂರಿನಲ್ಲಿ ಅಮೃತೇಶ್‌ ತಿಳಿಸಿದ್ದಾರೆ.

ADVERTISEMENT

‘ಮುಖ್ಯಮಂತ್ರಿಯಾಗಿದ್ದ ಹಾಗೂ ರಾಜಕೀಯ ಪಕ್ಷದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೇ ಆರೋಪಿ ಪರ ನಿಂತಿದ್ದಾರೆ. ತನಿಖೆಯಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.