ADVERTISEMENT

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಹೊಸ ನಿಯಮ

​ಪ್ರಜಾವಾಣಿ ವಾರ್ತೆ
Published 22 ಮೇ 2015, 20:26 IST
Last Updated 22 ಮೇ 2015, 20:26 IST

ಬೆಂಗಳೂರು: ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವಾಗ ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರತ್ಯೇಕ ನಿಯಮಗಳನ್ನು ರೂಪಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

‘40 ವರ್ಷಗಳಿಂದ ಜಾರಿಯಲ್ಲಿರುವ ನಿಯಮದ ಅಡಿಯಲ್ಲಿ  ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ಅದಕ್ಕಾಗಿ ಪ್ರತ್ಯೇಕ ನಿಯಮ ತರಲಾಗುವುದು’ ಎಂದರು.
ಈ ವರ್ಷ ತಪ್ಪು ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಆರು ಉಪನ್ಯಾಸಕರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಮೌರುಮೌಲ್ಯಮಾಪನ, ಮರು ಎಣಿಕೆ, ಛಾಯಾಪ್ರತಿಗಳಿಗಾಗಿ ನಿಗದಿ  ಪಡಿಸಿರುವ ಶುಲ್ಕ ಹೆಚ್ಚಾಯಿತು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಳೆದ ವರ್ಷವೂ ಇಷ್ಟೇ ಶುಲ್ಕ ಇತ್ತು. ‘ಮೂರು ವರ್ಷಗಳಿಗೊಮ್ಮೆ ಶುಲ್ಕ ಪರಿಷ್ಕರಣೆ ಆಗುತ್ತದೆ. ಹೈಕೋರ್ಟ್‌ ಆದೇಶದ ಅಡಿಯಲ್ಲಿ ಶುಲ್ಕ ನಿಗದಿ ಪಡಿಸಲಾಗಿದೆ’ ಎಂದರು.

ಶುಲ್ಕ ಕಡಿಮೆ ಮಾಡಿದರೆ, ಎಲ್ಲರೂ ಮೌರುಮೌಲ್ಯಮಾಪನ ಹಾಗೂ ಛಾಯಾಪ್ರತಿಗಳಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಲಕ್ಷಾಂತರ ಅರ್ಜಿಗಳು ಬಂದರೆ, ಅದು ಮತ್ತೊಂದು ಪರೀಕ್ಷೆ ಮಾಡಿದಂತೆಯೇ ಆಗುತ್ತದೆ ಎಂದು ವಿವರಿಸಿದರು.

‘ಈಗ ಶುಲ್ಕ ಕಡಿತಗೊಳಿಸುವುದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಹಾಗಾಗಿ ಮುಂದೆ ಈ ವಿಚಾರವನ್ನು ಪರಿಗಣಿಸಲಾಗುವುದು’ ಎಂದು ತಿಳಿಸಿದರು.
*
ಸುಷಮಾ ವಿರುದ್ಧ ದೂರು
ಬೆಂಗಳೂರು:
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಂಟಾಗಿರುವ ಗೊಂದಲಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸುಷಮಾ ಗೋಡ್‌ಬೋಲೆ ಅವರೇ ಕಾರಣ ಎಂದು ಆರೋಪಿಸಿರುವ ಪೋಷಕರ ಸಂಘ, ಅವರ ವಿರುದ್ಧ ಕರ್ತವ್ಯಚ್ಯುತಿ ಪ್ರಕರಣ ದಾಖಲಿಸುವಂತೆ ಲೋಕಾಯುಕ್ತರಿಗೆ ಶುಕ್ರವಾರ ದೂರು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.