ADVERTISEMENT

ತಮಿಳುನಾಡಿಗೆ ಹಣ ಹೊತ್ತೊಯ್ದು ವಾಪಸ್‌ ತಂದಿದ್ದ

ರೌಡಿ ನಾಗರಾಜ್‌ ಪ್ರಕರಣ

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 19:50 IST
Last Updated 24 ಜುಲೈ 2017, 19:50 IST
ತಮಿಳುನಾಡಿಗೆ ಹಣ ಹೊತ್ತೊಯ್ದು ವಾಪಸ್‌ ತಂದಿದ್ದ
ತಮಿಳುನಾಡಿಗೆ ಹಣ ಹೊತ್ತೊಯ್ದು ವಾಪಸ್‌ ತಂದಿದ್ದ   

ಬೆಂಗಳೂರು: ‘ಉದ್ಯಮಿಗಳ ಅಪಹರಿಸಿ ಹಣ ಸುಲಿಗೆ ಮಾಡಿದ್ದ  ಆರೋಪಿ ಶ್ರೀರಾಮಪುರದ ರೌಡಿ ನಾಗರಾಜ್‌, ತಮಿಳುನಾಡಿಗೆ ಕೋಟಿ ಕೋಟಿ ಹಳೇ ನೋಟುಗಳನ್ನು ಹೊತ್ತೊಯ್ದಿದ್ದ. ಅಲ್ಲಿ ಅವುಗಳನ್ನು ಬದಲಾವಣೆ ಮಾಡಲು ಸಾಧ್ಯವಾಗದೆ ವಾಪಸ್‌ ತಂದಿದ್ದ.’

ಆರೋಪಿಯು ಸಂಗ್ರಹಿಸಿಟ್ಟಿದ್ದಾನೆ ಎನ್ನಲಾದ ಹೊಸ ನೋಟುಗಳ ಪತ್ತೆಗೆ ಮಲ್ಲೇಶ್ವರ ಉಪವಿಭಾಗ ಪೊಲೀಸರ ವಿಶೇಷ ತಂಡವು ನಡೆಸುತ್ತಿರುವ ತನಿಖೆಯಲ್ಲಿ ಈ ಅಂಶ ಗೊತ್ತಾಗಿದೆ.

‘ನಾಗರಾಜ್‌, ಆತನ ಮಕ್ಕಳಾದ ಗಾಂಧಿ, ಶಾಸ್ತ್ರಿ ಸೇರಿದಂತೆ 15 ಮಂದಿ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 13 ಪ್ರಕರಣಗಳು ದಾಖಲಾಗಿವೆ. ನಾಗರಾಜ್‌ ಮನೆ ಮೇಲೆ ದಾಳಿ ನಡೆಸಿದಾಗ ₹ 14.8 ಕೋಟಿ ಮೊತ್ತದ ರದ್ದಾದ ನೋಟುಗಳು ಸಿಕ್ಕಿದ್ದವು. ಅಂಥ ಹಳೇ ನೋಟುಗಳನ್ನು ಬದಲಾವಣೆ ಮಾಡಿದ್ದರ ಬಗ್ಗೆ ಸದ್ಯ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ವಿಶೇಷ ತಂಡದ ಅಧಿಕಾರಿಯೊಬ್ಬರು ತಿಳಿಸಿದರು.

‘ಮನೆಯಲ್ಲಿ ಕೋಟಿಗಟ್ಟಲೇ ಹಳೇ ನೋಟುಗಳನ್ನು ಸಂಗ್ರಹಿಸಿದ್ದ ನಾಗರಾಜ್‌, ಅವುಗಳ ಬದಲಾವಣೆಗೆ ಸಾಕಷ್ಟು ಪ್ರಯತ್ನಿಸಿದ್ದ. ತಮಿಳುನಾಡಿನಲ್ಲಿ ಇಬ್ಬರು ಏಜೆಂಟರನ್ನು ಸಂಪರ್ಕಿಸಿದ್ದ ಆತ, ಅವರ  ಮಾತಿನಂತೆ ಗೋಣಿಚೀಲದಲ್ಲಿ ದುಡ್ಡು ತುಂಬಿಕೊಂಡು ಕಾರಿನ ಡಿಕ್ಕಿಯಲ್ಲಿ ಇಟ್ಟುಕೊಂಡು ತಮಿಳುನಾಡಿಗೆ ಹೋಗಿದ್ದ.’

‘ಆತನನ್ನು ಬರಮಾಡಿಕೊಂಡಿದ್ದ ಏಜೆಂಟರು, ಅದೇ ಕಾರಿನಲ್ಲಿ ನಾಗರಾಜ್‌ನನ್ನು ಹಲವು ಉದ್ಯಮಿಗಳ ಬಳಿ ಕರೆದೊಯ್ದಿದ್ದರು. ಹಣಕ್ಕೆ ಕಮಿಷನ್‌ ಪಡೆದು ಹೊಸ ನೋಟುಗಳನ್ನು ಕೊಡುವಂತೆ ಉದ್ಯಮಿಗಳನ್ನು ಕೋರಿದ್ದರು. ಲಕ್ಷ ಹಣವಾದರೆ ಕೊಡುತ್ತೇವೆ. ಕೋಟಿಗಟ್ಟಲೇ ಹೊಸ ನೋಟು ಸಿಗುವುದಿಲ್ಲವೆಂದು  ಉದ್ಯಮಿಗಳು  ವಾಪಸ್ ಕಳುಹಿಸಿದ್ದರು’ ಎಂದು ವಿವರಿಸಿದರು.

ಆರ್‌.ಬಿ.ಐ ಕಚೇರಿ ಸುತ್ತಾಡಿದ್ದ: ‘ಏಜೆಂಟರ ಮೂಲಕ ನಾಗರಾಜ್‌, ಚೆನ್ನೈನ ಭಾರತೀಯ ರಿಸರ್ವ್‌ ಬ್ಯಾಂಕ್‌ ಸಿಬ್ಬಂದಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದ. ಆದರೆ, ಅದು ಸಾಧ್ಯವಾಗಿರಲಿಲ್ಲ’ ಎಂದು ಹಿರಿಯ ಅಧಿಕಾರಿ ತಿಳಿಸಿದರು.

‘ಬಳಿಕ ನಾಗರಾಜ್‌, ದುಡ್ಡಿನ ಸಮೇತ ವಾಪಸ್‌ ಮನೆಗೆ ಬಂದಿದ್ದ. ಇದೇ ರೀತಿ ಆತ ಹಲವು ಬಾರಿ ತಮಿಳುನಾಡಿಗೆ ಹೋಗಿ ಬಂದಿದ್ದಾನೆ. ಅಷ್ಟಾದರೂ ಹೊಸ ನೋಟು ಸಿಕ್ಕಿರಲಿಲ್ಲ. ಹೀಗಾಗಿ  ಹಳೇ ನೋಟುಗಳನ್ನೆಲ್ಲ ಮನೆಯಲ್ಲೇ ಇಟ್ಟುಕೊಂಡಿದ್ದ’ ಎಂದು  ಅವರು ಹೇಳಿದರು.

ಸಂಬಂಧಿಕರು, ಸ್ನೇಹಿತರ ವಿಚಾರಣೆ: ‘ನಾಗರಾಜ್‌ನಿಂದ ಹಣ ಪಡೆದಿದ್ದಾರೆ ಎನ್ನಲಾದ ಕೆಲ ಸಂಬಂಧಿಕರು ಹಾಗೂ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದೆವು. ಆದರೆ, ಅವರಿಂದ ಹೊಸ ಮಾಹಿತಿ ಗೊತ್ತಾಗಿಲ್ಲ’ ಎಂದು ಅಧಿಕಾರಿ ಹೇಳಿದರು.

‘ತಮಿಳುನಾಡಿನಲ್ಲೂ ಕೆಲವರನ್ನು ವಿಚಾರಣೆ ನಡೆಸಿದ್ದು, ನಾಗರಾಜ್‌ ದುಡ್ಡು ತಂದಿದ್ದ ಎಂಬುದನ್ನು ಅವರು ಖಚಿತಪಡಿಸಿದ್ದಾರೆ. ಸದ್ಯಕ್ಕಂತೂ ನಾಗರಾಜ್‌ ಬಳಿ ಹೊಸ ನೋಟುಗಳು ಇದ್ದವು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.