ADVERTISEMENT

ತಲೆಬಿಸಿಗೆ ಕಾರಣನಾದ ಕೋಟಿ ವಂಚಕ!

ಸಿಐಡಿ ವಿಚಾರಣೆ ತಪ್ಪಿಸಿಕೊಳ್ಳಲು ‘ಡ್ರೀಮ್ಸ್ ಜಿಕೆ’ ಮಾಲೀಕ ಸಚಿನ್ ನಾಯಕ್ ಕಸರತ್ತು

ಎಂ.ಸಿ.ಮಂಜುನಾಥ
Published 19 ಜುಲೈ 2017, 20:00 IST
Last Updated 19 ಜುಲೈ 2017, 20:00 IST
ಸಚಿನ್ ನಾಯಕ್
ಸಚಿನ್ ನಾಯಕ್   

ಬೆಂಗಳೂರು: ನಿವೇಶನದ ಆಮಿಷ ಒಡ್ಡಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದಡಿ ಜೈಲು ಸೇರಿರುವ ಟಿಜಿಎಸ್ ಕಂಪೆನಿ ಮಾಲೀಕ ಸಚಿನ್ ನಾಯಕ್, ಸಿಐಡಿ ಅಧಿಕಾರಿಗಳು ವಿಚಾರಣೆಗೆ ಕರೆದಾಗಲೆಲ್ಲ ಅನಾರೋಗ್ಯದ ನೆಪ ಹೇಳಿ  ಆಸ್ಪತ್ರೆಗೆ ದಾಖಲಾಗುತ್ತಿರುವುದು ತನಿಖಾ ತಂಡದ ತಲೆಬಿಸಿಗೆ ಕಾರಣವಾಗಿದೆ.

ಟಿಜಿಎಸ್, ಡ್ರೀಮ್ಸ್‌ ಜಿಕೆ ಹಾಗೂ ಗೃಹ ಕಲ್ಯಾಣ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಕಂಪೆನಿಗಳನ್ನು ಪ್ರಾರಂಭಿಸಿದ್ದ ಆರೋಪಿ, ಕೈಗೆಟಕುವ ಬೆಲೆಯಲ್ಲಿ ನಿವೇಶನ ಮತ್ತು ಫ್ಲ್ಯಾಟ್ ನೀಡುವುದಾಗಿ ಜನರಿಗೆ ನಂಬಿಸಿ ಕೋಟ್ಯಂತರ ರೂಪಾಯಿ ಸುಲಿಗೆ ಮಾಡಿದ್ದ. ಈ ಪ್ರಕರಣದಲ್ಲಿ ಸಚಿನ್ ಮಾತ್ರವಲ್ಲದೆ, ಕೃತ್ಯಕ್ಕೆ ಸಹಕರಿಸಿದ ಆರೋಪದಡಿ ಆತನ ಪತ್ನಿ ದಿಶಾ ಚೌಧರಿ ಕೂಡ ಜೈಲು ಸೇರಿದ್ದಾರೆ.

‘ಪ್ರಕರಣ ಸಿಐಡಿಗೆ ವರ್ಗವಾದ ಬಳಿಕ, ತನಿಖಾಧಿಕಾರಿಗಳು ಸಚಿನ್‌ನನ್ನು ಕಸ್ಟಡಿಗೆ ತೆಗೆದುಕೊಳ್ಳಲು ಮೂರು ಬಾರಿ ನ್ಯಾಯಾಲಯದಿಂದ ದಿನಾಂಕ ಪಡೆದಿದ್ದರು. ಈ ವಿಚಾರ ತಿಳಿದ ಆತ, ವಿಚಾರಣೆಗೆ ದಿನಾಂಕ ನಿಗದಿಯಾಗಿರುವ ಅವಧಿಯಲ್ಲೇ ಅನಾರೋಗ್ಯದ ನೆಪ ಹೇಳಿ ಮೂರು ಸಲವೂ ಆಸ್ಪತ್ರೆಗೆ ದಾಖಲಾಗಿದ್ದಾನೆ’ ಎಂದು ಸಿಐಡಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸಚಿನ್‌ನನ್ನು ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಜುಲೈ ಮೊದಲ ವಾರ ಅರ್ಜಿ ಸಲ್ಲಿಸಿದ್ದೆವು. ನ್ಯಾಯಾಧೀಶರು ಜುಲೈ 16ಕ್ಕೆ ದಿನಾಂಕ ನಿಗದಿ ಮಾಡಿ ಆದೇಶ ಹೊರಡಿಸಿದ್ದರು. ಈ ವಿಚಾರವನ್ನು ವಕೀಲರ ಮೂಲಕ ತಿಳಿದ ಆತ, ಜುಲೈ 11ರಿಂದ 17ರವರೆಗೆ  ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ. ಅಲ್ಲದೆ, ‘ಸಚಿನ್‌ ಅವರಿಗೆ ಒಂದು ವಾರ ವಿಶ್ರಾಂತಿಯ ಅಗತ್ಯವಿದೆ’ ಎಂದು ವೈದ್ಯರಿಂದ ಬರೆಸಿಕೊಂಡಿದ್ದಾನೆ. ಹೀಗಾಗಿ, ಜುಲೈ 24ರವರೆಗೆ ನಾವು ಆತನ ಸಹವಾಸಕ್ಕೆ ಹೋಗುವಂತಿಲ್ಲ. ಕಳೆದ ತಿಂಗಳು ಸಹ ಎರಡು ಸಲ ಇದೇ ತಂತ್ರ ಬಳಸಿದ್ದ’ ಎಂದು ಮಾಹಿತಿ ನೀಡಿದರು.

37 ಪ್ರಕರಣಗಳಲ್ಲಿ ಜಾಮೀನು!: ‘ಸಚಿನ್ ಪತ್ನಿ ದಿಶಾ ಚೌಧರಿ ಕೂಡ ವಿಚಾರಣೆಗೆ ಸಹಕರಿಸುತ್ತಿಲ್ಲ. ಮಡಿವಾಳ ಠಾಣೆಯಲ್ಲಿ ದಾಖಲಾಗಿದ್ದ 37 ಪ್ರಕರಣಗಳಲ್ಲಿ ಅವರು ಜಾಮೀನು ಪಡೆದುಕೊಂಡಿದ್ದಾರೆ. ಹೆಣ್ಣೂರು, ವಿದ್ಯಾರಣ್ಯಪುರ, ಸೇರಿದಂತೆ ಇತರೆ ಠಾಣೆಗಳಲ್ಲಿ ದಾಖಲಾಗಿರುವ 10 ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಹಂತದಲ್ಲಿದೆ’ ಎಂದು ತನಿಖಾಧಿಕಾರಿಗಳು ಹೇಳಿದರು.

‘ದಿಶಾ ವಿರುದ್ಧ ಜೀವಾವಧಿ ಶಿಕ್ಷೆ ನೀಡುವಂಥ ಆರೋಪಗಳೇನೂ ಇಲ್ಲ. ಅವರಿಗೆ ಶಾಲೆಗೆ ಹೋಗುವ ಇಬ್ಬರು ಮಕ್ಕಳಿದ್ದಾರೆ. ಮುಂಬೈನಲ್ಲಿ ಸ್ವಂತ ಮನೆ ಇರುವುದರಿಂದ ಅವರು ದೇಶ ಬಿಟ್ಟು ಹೋಗುವ ಸಾಧ್ಯತೆ ಇಲ್ಲ’ ಎಂಬ ಕಾರಣಗಳಿಂದ 37 ಪ್ರಕರಣಗಳಲ್ಲಿ ಜಾಮೀನು ಮಂಜೂರು ಮಾಡಿರುವ 52ನೇ ಸಿಸಿಎಚ್ ನ್ಯಾಯಾಲಯ, ‘ಪ್ರತಿ ಮಂಗಳವಾರ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಬೇಕು’ ಎಂದು  ಸೂಚನೆ ನೀಡಿದೆ.

ಜಾಮೀನು ಸಿಕ್ಕರೂ, ಉಳಿದ ಹತ್ತು ಪ್ರಕರಣಗಳಿಂದಾಗಿ ದಿಶಾ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಉಳಿಯಬೇಕಾಗಿದೆ.

ವಂಚಿಸಿದ್ದು ₹ 657 ಕೋಟಿ!
‘ಡ್ರೀಮ್ಸ್‌ ಜಿಕೆ’ ಕಂಪೆನಿ ಹೆಸರಿನಲ್ಲಿ ₹ 310 ಕೋಟಿ, ‘ಟಿಜಿಎಸ್’ ಹೆಸರಿನಲ್ಲಿ ₹ 256 ಕೋಟಿ ಹಾಗೂ ‘ಗೃಹ ಕಲ್ಯಾಣ್‌’ ಹೆಸರಿನಲ್ಲಿ  ₹ 91 ಕೋಟಿ ವಂಚಿಸಿರುವುದು ಈವರೆಗಿನ ತನಿಖೆಯಿಂದ ಗೊತ್ತಾಗಿದೆ. ಸಚಿನ್ ಹಾಗೂ ಆತನ ಪತ್ನಿಯ ಹೆಸರಿನಲ್ಲಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದರು.

ಮುಂಬೈನಲ್ಲೂ ವಿಚಾರಣೆ
‘ಸಚಿನ್ ಇಷ್ಟೆಲ್ಲಾ ವಂಚನೆ ಆರೋಪ ಎದುರಿಸುತ್ತಿದ್ದರೂ, ಯಾವ ಕಂಪೆನಿಗಳ ನೋಂದಣಿಯಲ್ಲೂ ತನ್ನ ಹೆಸರು ಇಲ್ಲದಂತೆ ನೋಡಿಕೊಂಡಿದ್ದಾನೆ. ಕಂಪೆನಿಗಳ ನಿರ್ದೇಶಕರ ಸ್ಥಾನದಲ್ಲಿ ಆತನ ಇಬ್ಬರು ಪತ್ನಿಯರಾದ ದಿಶಾ ಮತ್ತು ಮನ್ದೀಪ್ ಕೌರ್ ಅವರ ಹೆಸರುಗಳಿವೆ’ ಎಂದು ತನಿಖಾಧಿಕಾರಿಗಳು ಹೇಳಿದರು.

‘ಸಚಿನ್ ಮುಂಬೈನವನು. ಆತನ ವ್ಯವಹಾರ ಆರಂಭವಾಗಿದ್ದು ಅಲ್ಲಿಂದಲೇ. ಹೀಗಾಗಿ, ಹೆಚ್ಚಿನ ವಿಚಾರಣೆಗಾಗಿ ತಿಂಗಳ ಹಿಂದೆ ಆರೋಪಿಯನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದೆವು. ಅಲ್ಲೂ ತನಿಖೆಯ ದಿಕ್ಕು ತಪ್ಪಿಸಿದ್ದನ್ನು ಬಿಟ್ಟರೆ, ಆತ ಸೂಕ್ತ ಮಾಹಿತಿಯನ್ನೇನೂ ನೀಡಲಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.