ADVERTISEMENT

ತ್ಯಾಜ್ಯ ಪುನರ್ಬಳಕೆ ಬಗ್ಗೆ ಮಕ್ಕಳ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 16:06 IST
Last Updated 23 ಏಪ್ರಿಲ್ 2018, 16:06 IST

‘ರಿಪೇರಿ, ಪುನರಾವರ್ತನೆ ಹಾಗೂ ಪುನರ್ಬಳಕೆ’ ಉದ್ದೇಶದೊಂದಿಗೆ ಅರಮನೆ ರಸ್ತೆಯ ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌ನಲ್ಲಿ ಮಕ್ಕಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಮಕ್ಕಳಿಗೆ ಪರಿಸರ ಕಾಪಾಡುವ ನಿಟ್ಟಿನಲ್ಲಿ ಒಣ ತಾಜ್ಯ ವಸ್ತುಗಳ ಪುನರ್‌ಬಳಕೆ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಾಗಾರ ನಡೆಸಲಾಗುತ್ತಿದೆ. ಇಲ್ಲಿ ಮಕ್ಕಳಿಗೆ ತ್ಯಾಜ್ಯವಸ್ತುಗಳನ್ನು ಯಾವ ಯಾವ ರೀತಿಯಲ್ಲಿ ಪುನರ್‌ ಬಳಸಬಹುದು ಮತ್ತು ಅದರಿಂದ ಪರಿಸರಕ್ಕೆ ಆಗುವ ಲಾಭಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ ಎನ್ನುತ್ತಾರೆ ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌ನ ಡೆಪ್ಯುಟಿ ಕ್ಯುರೇಟರ್‌ ದರ್ಶನ್‌ಕುಮಾರ್‌.

ಈ ಕಾರ್ಯಾಗಾರ ಏಪ್ರಿಲ್‌ 24ರಿಂದ 28ರವರೆಗೆ ಐದು ದಿನಗಳ ಕಾಲ ಬೆಳಿಗ್ಗೆ 11ರಿಂದ 2ರವರೆಗೆ ನಡೆಯಲಿದೆ.  ಏಳು ವರ್ಷ ಮೇಲ್ಪಟ್ಟ ಮಕ್ಕಳು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಇದು ಸಂಪೂರ್ಣ ಉಚಿತ ಕಾರ್ಯಾಗಾರ. ಮನೆಯಲ್ಲಿ ಅಥವಾ ಸುತ್ತ ಪರಿಸರದಲ್ಲಿ ಸಿಗುವ ಹಳೆ ವಸ್ತುಗಳನ್ನು ಮಕ್ಕಳೇ ತೆಗೆದುಕೊಂಡು ಬಂದರೆ ಪುನರ್ಬಳಕೆ ಬಗ್ಗೆ ಕಲಿತುಕೊಳ್ಳಬಹುದಾಗಿದೆ.

ADVERTISEMENT

ಏಪ್ರಿಲ್‌ 24ರಂದು ರಿಪೇರಿ ಬಗ್ಗೆ ಪರಿಚಯ ನಡೆಯಲಿದೆ. ‘ರಿಪೇರಿ ಎಂಬುದು ಫಿಲಾಸಫಿ’ ಎಂಬುದನ್ನು ಗೊಂಬೆಗಳ ಮೂಲಕ ಕತೆ ಹೇಳುತ್ತಾ ಮಕ್ಕಳಿಗೆ ಹೇಳಿಕೊಡಲಾಗುತ್ತದೆ. 25ರಂದು ‘ತ್ಯಾಜ್ಯ ಎಂದರೇನು?’ ತ್ಯಾಜ್ಯಗಳ ಬಗ್ಗೆ ಮಕ್ಕಳ ಜೊತೆ ಸಂವಾದ ಕಾರ್ಯಕ್ರಮ. 26ರಂದು ತ್ಯಾಜ್ಯದಿಂದ ಬೊಂಬೆ ತಯಾರಿ, ಏಪ್ರಿಲ್‌ 27ರಂದು ಹಳೆ ಗುಜಿರಿ ವಸ್ತುಗಳಿಂದ ಗೊಂಬೆಗಳ ತಯಾರಿ, 28ರಂದು ಬಾಟಲಿಗಳ ಪುನರ್ಬಳಕೆ ಬಗ್ಗೆ ಕಾರ್ಯಾಗಾರ ನಡೆಯಲಿದೆ.

ಈ ಕಾರ್ಯಾಗಾರದಲ್ಲಿ ಕೆಲವೇ ಮಕ್ಕಳಿಗಷ್ಟೇ ಭಾಗವಹಿಸಲು ಅವಕಾಶವಿದೆ. ಆಸಕ್ತರು– ngma.bengaluru@gmail.comಗೆ ಮೇಲ್‌ ಮಾಡಿ ನೋಂದಣಿ ಮಾಡಿಕೊಳ್ಳಬಹುದು.

ಸ್ಥಳ– ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌, #49, ಮಾಣಿಕ್ಯವೇಲು ಮಾನ್ಷನ್‌, ಅರಮನೆ ರಸ್ತೆ. ಸಂಪರ್ಕಕ್ಕೆ– 080–2234233

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.