ADVERTISEMENT

ತ್ರಿವಳಿ ಕೊಲೆ: ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 20:05 IST
Last Updated 24 ಜುಲೈ 2014, 20:05 IST

ಬೆಂಗಳೂರು: ಜಯನಗರ 4ನೇ ‘ಟಿ’ ಹಂತದಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಬಂಧಿಸಿದ್ದ ಗೋವಿಂದರಾಜು ಎಂಬಾತನಿಗೆ 14ನೇ ತ್ವರಿತ ನ್ಯಾಯಾಲಯವು ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಮೂಲತಃ ಶಿವಮೊಗ್ಗದ ಗೋವಿಂದರಾಜು, 2009ರ ಜನವರಿ 20ರಂದು  ಸತ್ಯಭಾಮ (80), ಅವರ ಮಗಳು ವಿಜಯಲಕ್ಷ್ಮಿ (59) ಹಾಗೂ ಸೊಸೆ ಜಯಶ್ರೀ (45) ಎಂಬುವರನ್ನು ಕೊಲೆ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡ ತಿಲಕ್‌ನಗರ ಪೊಲೀಸರು, ನಂದಿನಿ ಲೇಔಟ್‌ನಲ್ಲಿ ಆತನನ್ನು ಬಂಧಿಸಿದ್ದರು.

ಅಗ್ರಿಗೋಲ್ಡ್‌ ಫಾರ್ಮ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಜಯಶ್ರೀ ಅವರಿಗೆ ಗೋವಿಂದರಾಜುನ ಪರಿಚಯವಾಗಿತ್ತು. ಕ್ರಮೇಣ ಆತ ಅವರ ಕುಟುಂಬಕ್ಕೂ ಆಪ್ತನಾಗಿದ್ದ.

ಘಟನಾ ದಿನ ಬೆಳಿಗ್ಗೆ ಮೃತರ ಮನೆಗೆ ಹೋಗಿದ್ದ ಆತ, ಹಣ ದೋಚುವ ಉದ್ದೇಶದಿಂದ ಜಯಶ್ರೀ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಇದನ್ನು ಗಮನಿಸಿದ ವಿಜಯಲಕ್ಷ್ಮಿ ಅವರ ಮೇಲೂ ಹಲ್ಲೆ ನಡೆಸಿ ಉಸಿರುಗಟ್ಟಿಸಿ ಕೊಂದಿದ್ದ. ಅಲ್ಲದೆ, ಕೋಣೆಯಲ್ಲಿ ನಿದ್ರೆ ಮಾಡುತ್ತಿದ್ದ ಸತ್ಯಭಾಮ ಅವರನ್ನು ಸಹ ಕೊಲೆ ಮಾಡಿ ₨10 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ.

ಈ ಸಂಬಂಧ ಎಸಿಪಿ ಎನ್‌.ನಾಗರಾಜು, ಇನ್‌ಸ್ಪೆಕ್ಟರ್‌ ಶ್ರೀನಿಧಿ, ಎಸ್‌ಐ ನಿರಂಜನಕುಮಾರ್‌ ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ವಕೀಲರಾದ ಬಾಲಕೃಷ್ಣ ವಾದ
ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.