ADVERTISEMENT

ದಲಿತರಿಗೆ ಸ್ಮಶಾನದಲ್ಲೂ ಜಾಗವಿಲ್ಲ!

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2014, 19:31 IST
Last Updated 27 ಆಗಸ್ಟ್ 2014, 19:31 IST

ಹೆಸರಘಟ್ಟ:  ಹೋಬಳಿಯ ತರಬನಹಳ್ಳಿ ಗ್ರಾಮದ ಸ್ಮಶಾನದಲ್ಲಿ ದಲಿತರಿಗೆ ಅಂತ್ಯಸಂಸ್ಕಾರಕ್ಕೆ ಅವಕಾಶ ನಿರಾಕರಿ­ಸಲಾಗುತ್ತಿದೆ.  ಈ ಬಗ್ಗೆ ದಲಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತರ ಯಾವುದೇ ಜಾತಿಯವರನ್ನು ಮಣ್ಣು ಮಾಡುವ ಜಾಗದಲ್ಲಿ ದಲಿತರ ಅಂತ್ಯಸಂಸ್ಕಾರ ಮಾಡುವಂತಿಲ್ಲ. ಇದೇ ಸ್ಮಶಾನದ ಪಕ್ಕದಲ್ಲಿರುವ ಅರ್ಕಾವತಿ ಕಾಲುವೆಯ ಮೇಲೆ ದಲಿತರು ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ.

‘40 ವರ್ಷಗಳ ಹಿಂದೆ ರಾಜ್ಯ ಸರ್ಕಾರ ಸ್ಮಶಾನಕ್ಕಾಗಿ ಸರ್ವೆ ಸಂಖ್ಯೆ 22ರಲ್ಲಿ 40 ಗುಂಟೆ ಜಮೀನನ್ನು ನೀಡಿತ್ತು. ಸ್ಮಶಾನದ ಪಕ್ಕದಲ್ಲಿ ಒಂದು ಕಡೆ ರೈಲ್ವೆ ಹಳಿ ಇದೆ. ಉಳಿದ ಮೂರು ಕಡೆಗಳಲ್ಲಿ ಖಾಸಗಿ ವ್ಯಕ್ತಿಗಳು ಜಾಗ ಅತಿಕ್ರಮಣ ಮಾಡಿ ಲೇಔಟ್ ನಿರ್ಮಿಸಿಕೊಂಡಿದ್ದಾರೆ. ಉತ್ತರ ದಿಕ್ಕಿನಲ್ಲಿ ಅರ್ಕಾವತಿ ನದಿ ಪಾತ್ರದ ಮೇಲೆಯೇ ಲೇಔಟ್‌ ನಿರ್ಮಾಣವಾಗಿದೆ’ ಎಂದು ಗ್ರಾಮಸ್ಥರು ದೂರುತ್ತಾರೆ.

‘ರೈಲ್ವೇ ಗೇಟ್ ಪಕ್ಕದಲ್ಲಿ ಸರ್ಕಾರ ನೀಡಿರುವ ಭೂಮಿಯಲ್ಲಿ ಮೇಲ್ಜಾತಿಯವರೆಲ್ಲ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. ಇತರರು ಅವರವರ ಜಮೀನಿನಲ್ಲಿ ಅಥವಾ ಕಾಲುವೆ ಮೇಲೆ ಮಣ್ಣು ಮಾಡುತ್ತಾರೆ’ ಎಂದು ಗ್ರಾಮಸ್ಥ ಅಣ್ಣಯ್ಯ ಮಾಹಿತಿ ನೀಡಿದರು.

‘ಅರ್ಕಾವತಿ ಸುತ್ತಮುತ್ತ ಏನೂ ಮಾಡಬಾರ್ದು ಅಂತಾರೆ ಸಾರ್. ಆದ್ರು ನಾವು ಬೇರೆ ಕಡೆ ಜಾಗ ಇಲ್ಲದೇ ಇಲ್ಲೇ ಮಣ್‍ಮಾಡಿ, ಗೋರಿ ಕಟ್ಟಿದ್ದೀವಿ. ನಾಳೆ ಇವೆಲ್ಲನೂ ಒಡ್ದ್ ಹಾಕ್ತರೆ’ ಎಂದು ಆಟೊ ಚಾಲಕ ಗೋವಿಂದ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.