ADVERTISEMENT

ದಾಖಲಾತಿ ಕೊರತೆಗೆ ಇಲಾಖೆಯೇ ಕಾರಣ

ಸರ್ಕಾರಿ ಶಾಲೆಗಳ ವಿರುದ್ಧ ಕಿಡಿಕಾರಿದ ಶಿಕ್ಷಣ ಸಚಿವ ತನ್ವೀರ್‌ ಸೇಠ್

​ಪ್ರಜಾವಾಣಿ ವಾರ್ತೆ
Published 25 ಜುಲೈ 2016, 19:30 IST
Last Updated 25 ಜುಲೈ 2016, 19:30 IST
ಸಚಿವ ತನ್ವೀರ್‌ ಸೇಠ್‌ ಅವರು ಶೈಕ್ಷಣಿಕ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದರು.  ಅಜಯ್‌ ಸೇಠ್‌ ಹಾಗೂ ಬಸವರಾಜ ಗುರಿಕಾರ ಇದ್ದಾರೆ  – ಪ್ರಜಾವಾಣಿ ಚಿತ್ರ
ಸಚಿವ ತನ್ವೀರ್‌ ಸೇಠ್‌ ಅವರು ಶೈಕ್ಷಣಿಕ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದರು. ಅಜಯ್‌ ಸೇಠ್‌ ಹಾಗೂ ಬಸವರಾಜ ಗುರಿಕಾರ ಇದ್ದಾರೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಸರ್ಕಾರಿ ಶಾಲೆಗಳು ದಾಖಲಾತಿ ಕೊರತೆ ಎದುರಿಸುತ್ತಿರುವುದಕ್ಕೆ ಮೂಲ ಕಾರಣ ಶಿಕ್ಷಣ ಇಲಾಖೆಯೇ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಕಿಡಿಕಾಡಿದ್ದಾರೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇಲ್ಲಿನ ಶಿಕ್ಷಕರ ಸದನದಲ್ಲಿ ಸೋಮವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಗಾರ ಹಾಗೂ ಶಿಕ್ಷಕ–ಪ್ರತಿನಿಧಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿ 3 ಕಿ.ಮೀಗೆ ಒಂದು ಪ್ರಾಥಮಿಕ ಶಾಲೆ, ಪ್ರತಿ 7 ಕಿ.ಮೀಗೆ ಒಂದು ಪ್ರೌಢ ಶಾಲೆ, 15 ಕಿ.ಮೀಗೆ ಒಂದು ಪದವಿ ಪೂರ್ವ ಕಾಲೇಜು ಇರಬೇಕು ಎಂಬ ನಿಯಮವನ್ನು ಗಾಳಿಗೆ ತೂರಿ ಅವುಗಳ ಮಧ್ಯದಲ್ಲಿಯೇ ಖಾಸಗಿ ಶಾಲೆಗಳಿಗೆ ಅನುಮತಿ ನೀಡಿರುವುದು ಇಲಾಖೆಯದ್ದೇ ತಪ್ಪು ಎಂದು ಅವರು ಹೇಳಿದರು.

‘ಹೆಣ್ಣು ಮಗು ಹುಟ್ಟಿದರೆ ಸರ್ಕಾರ ಭಾಗ್ಯಲಕ್ಷ್ಮೀ  ಬಾಂಡ್‌ ನೀಡುತ್ತಿದ್ದು, ಅದನ್ನು ಅಂಗನವಾಡಿಗಳ ಮೂಲಕ ವಿತರಿಸಲಾಗುತ್ತಿದೆ. ಈ ಬಾಂಡ್‌ ವಿತರಣೆ ಅಂಗನವಾಡಿಗಳ ಬದಲು ಸರ್ಕಾರಿ ಶಾಲೆಗಳಿಗೆ ವಹಿಸಿದರೆ ಇಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಳವಾಗುತ್ತದೆ  ಎಂದು ಅಭಿಪ್ರಾಯಪಟ್ಟರು.

‘ರಾಜ್ಯದಲ್ಲಿ ಒಟ್ಟು 47 ಸಾವಿರ ಸರ್ಕಾರಿ ಶಾಲೆಗಳಿವೆ. ಈ ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ನಿರ್ವಹಣೆ, ನಿರ್ಮಾಣವನ್ನು  ಸ್ಥಳೀಯ ಸಂಸ್ಥೆಗಳಾದ ಗ್ರಾಮೀಣ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಗ್ರಾಮೀಣ  ಅಭಿವೃದ್ಧಿ ಮತ್ತು ನಗರಾಭಿವೃದ್ಧಿ ಇಲಾಖೆಗಳೇ ವಹಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗುತ್ತಿದೆ  ಎಂದರು.

‘ಶೌಚಾಲಯ ನಿರ್ವಹಣೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಅನುದಾನ ಬಳಸುವ ಮಾಡುವ ಬದಲು ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬಳಸುವುದರಿಂದ  ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಅನುಕೂಲವಾಗಿಲ್ಲ. ಆದ್ದರಿಂದ ಅನುದಾನ ಬಳಕೆಗೆ ಹೊಸ ಮಾರ್ಗ
ಸೂಚಿ ರೂಪಿಸಲಾಗುವುದು’ ಎಂದು ಅವರು ತಿಳಿಸಿದರು.

ಶಿಕ್ಷಕರ ತರಬೇತಿಯಲ್ಲಿ ಬದಲಾವಣೆ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜಯ್‌ ಸೇಠ್‌ ಮಾತನಾಡಿ, ‘ಪ್ರತಿ ವರ್ಷ ಪ್ರಾಥಮಿಕ ಶಿಕ್ಷಕರಿಗಾಗಿ ನಡೆಸುವ ತರಬೇತಿಯಲ್ಲಿ ಮೂಲಭೂತ ಬದಲಾವಣೆ ತರಲಾಗುವುದು.

ಶಿಕ್ಷಕರಿಗೆ ಯಾವ ವಿಷಯದಲ್ಲಿ ತರಬೇತಿ ಅಗತ್ಯವಿದೆ ಎನ್ನುವುದನ್ನು ಅರಿತು ಆ ಪ್ರಕಾರ  ತರಬೇತಿ ನೀಡಲು ನಿರ್ಧರಿಸಲಾಗಿದೆ’ ಎಂದರು.
‘ಗಣಿತ ಮತ್ತು ಇಂಗ್ಲಿಷ್‌ ವಿಷಯದಲ್ಲಿ  ಶಿಕ್ಷಕರಿಗೆ ಹೆಚ್ಚಿನ ತರಬೇತಿ ಅವಶ್ಯತೆ ಇದೆ. ಇದಕ್ಕೆ ಕೇವಲ 5 ದಿನ ತರಬೇತಿಯಿಂದ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ. ಅದಕ್ಕಾಗಿ ಬೆಂಗಳೂರಿನಲ್ಲಿನ ‘ರಿಜನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಗ್ಲಿಷ್‌’ ಸಹಾಯದೊಂದಿಗೆ ಶಿಕ್ಷಕರಿಗೆ ಒಂದು ತಿಂಗಳಲ್ಲಿ ಇಂಗ್ಲಿಷ್‌ ತರಬೇತಿ ನಡೆಸಲಾಗುವುದು’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಬಸವರಾಜ ಗುರಿಕಾರ ಅವರು ಮಾತನಾಡಿ, ‘ಹೆಚ್ಚುವರಿ ಶಿಕ್ಷಕರ ಸ್ಥಳಾಂತರ ಸಮಸ್ಯೆಯಿಂದಾಗಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಅದನ್ನು ಸ್ಥಗಿತಗೊಳಿಸಬೇಕು ಮತ್ತು ಒಂದು ವರ್ಗಕ್ಕೆ ಇಬ್ಬರು ಶಿಕ್ಷಕರಂತೆ ನಿಯೋಜನೆ ಮಾಡಬೇಕು’ ಎಂದು ಅವರು ಕೋರಿದರು.

ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಮುಖ್ಯೋಪಾಧ್ಯಾಯರನ್ನು ಹೊರತುಪಡಿಸಿ ವಿದ್ಯಾರ್ಥಿ, ಶಿಕ್ಷಕರ ಅನುಪಾತ ನಿಗದಿಪಡಿಸಬೇಕು, ವರ್ಗಾವಣೆ ನಿಯಂತ್ರಣ ಕಾಯ್ದೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಬೇಡಿಕೆಗಳು ಸೇರಿದಂತೆ ಶಿಕ್ಷಕರ ಸಂಘದ ನಾನಾ ಬೇಡಿಕೆಗಳನ್ನು ಸಚಿವರಿಗೆ ಸಲ್ಲಿಸಿದರು.  ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಎಂ. ನಾರಾಯಣಸ್ವಾಮಿ, ಉಪಾಧ್ಯಕ್ಷ ಅರುಣಪ್ರತಾಪ ರೆಡ್ಡಿ ಮತ್ತಿತರು ಕಾರ್ಯಾಗಾರದಲ್ಲಿ ಹಾಜರಿದ್ದರು.

ಶಾಲೆಗಳಲ್ಲಿ ನರ್ಸರಿ ತರಬೇತಿ
‘ಪ್ರಾಥಮಿಕ ಪೂರ್ವದಲ್ಲಿ ನರ್ಸರಿ ಶಾಲೆ ಪ್ರಾರಂಭ ಮಾಡಿದರೆ ಹೆಚ್ಚಿನ ವಿದ್ಯಾರ್ಥಿಗಳು ಬರುತ್ತಾರೆ. ಮುಂದೆ ಅವರು ಸರ್ಕಾರಿ ಶಾಲೆಗಳಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸಲು ಅನುಕೂಲವಾಗುತ್ತದೆ. ಇದರಿಂದ ಪೋಷಕರಿಗೆ ಖಾಸಗಿ ಶಾಲೆಗಳ ಮೇಲಿನ ಆಸಕ್ತಿ ಕಡಿಮೆ ಮಾಡಬಹುದು’ ಎಂದು ತನ್ವೀರ್‌ ಸೇಠ್‌ ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.