ADVERTISEMENT

ದಾಖಲೆ ಮಳೆಯ ನೀರು ಚರಂಡಿ ಪಾಲು

ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಕೆಗೆ ನಗರ ನಿವಾಸಿಗಳ ನಿರಾಸಕ್ತಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2015, 19:57 IST
Last Updated 24 ನವೆಂಬರ್ 2015, 19:57 IST

ಬೆಂಗಳೂರು: ರಾಜಧಾನಿಯಲ್ಲಿ  ಈ ತಿಂಗಳು (23ರ ವರೆಗೆ) 277 ಮಿ.ಮೀ. ಮಳೆ ಸುರಿದಿದೆ. ಇದು ನವೆಂಬರ್‌ ತಿಂಗಳ ಶತಮಾನದ ದಾಖಲೆಯ ಮಳೆ. ಆದರೆ, ಮಳೆಯ ಲಾಭವನ್ನು ನಗರದ ನಿವಾಸಿಗಳು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಜಲಮಂಡಳಿ ಹಾಗೂ ನಗರ ನಿವಾಸಿಗಳು ಮಳೆ ನೀರನ್ನು ಸಮರ್ಪಕವಾಗಿ ಸಂಗ್ರಹ ಮಾಡದ ಕಾರಣ ಮಳೆ ನೀರು ಚರಂಡಿಗಳಿಗೆ ಸೇರಿದೆ.

ನಗರದಲ್ಲಿ 60x40 ಚದರ ಅಡಿ ಹಾಗೂ ಅದಕ್ಕಿಂತಲೂ ಹೆಚ್ಚು ವಿಸ್ತೀರ್ಣದ ನಿವೇಶನಗಳಲ್ಲಿ ನಿರ್ಮಾಣಗೊಂಡ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವಿಧಾನವನ್ನು  ಅಳವಡಿಸಿಕೊಂಡವರು 55,578 ಮಂದಿ ಮಾತ್ರ. ಬಿಬಿಎಂಪಿ ನಗರದ ಕೆಲವು ಉದ್ಯಾನಗಳಲ್ಲಿ ಮಳೆ ನೀರು ಸಂಗ್ರಹದ ವ್ಯವಸ್ಥೆ ಅಳವಡಿಸಿದೆ.

ಈ ತಿಂಗಳಲ್ಲಿ 60x40 ನಿವೇಶನದ ಮನೆಯಲ್ಲಿ 49,500 ಲೀಟರ್‌ ಮಳೆ ನೀರು ಹಾಗೂ 30x40 ನಿವೇಶನದ ಮನೆಯಲ್ಲಿ 27,500 ಲೀಟರ್‌ ಮಳೆ ನೀರು ಸಂಗ್ರಹಕ್ಕೆ ಅವಕಾಶ ಇತ್ತು. ನಾಲ್ಕು ಜನರು ಇರುವ ಕುಟುಂಬಕ್ಕೆ ತಿಂಗಳಿಗೆ 1500 ಲೀಟರ್‌ ಅವಶ್ಯಕತೆ ಇದೆ. ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಂಡಿದ್ದರೆ ಕಾವೇರಿ ನೀರಿನ ಅವಲಂಬನೆ ತಪ್ಪುತ್ತಿತ್ತು ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಕೆಗಾಗಿ ಜನರು ಅಧಿಕ ವೆಚ್ಚ ಮಾಡುವ ಅಗತ್ಯ ಇಲ್ಲ. ಮನೆಯಲ್ಲಿ ಸಂಪ್‌ ಇದ್ದರೆ ಕುಟುಂಬ ₹8 ಸಾವಿರ ವೆಚ್ಚ ಮಾಡಿದರೆ ಸಾಕು ಎಂದು ಅವರು ಮಾಹಿತಿ ನೀಡಿದರು. ಈ ನಡುವೆ, ದಾಖಲೆಯ ಮಳೆಯಿಂದಾಗಿ ನಗರದ ಕೆರೆಗಳಿಗೆ ಅಧಿಕ ನೀರು ಬಂದಿದೆ. ಬತ್ತಿದ ಕೊಳವೆಬಾವಿಗಳಲ್ಲಿ ನೀರು ಉಕ್ಕಲಾರಂಭಿಸಿದೆ.

‘ನಗರದ ಬಹುತೇಕ  ಕೆರೆಗಳು ತುಂಬಿವೆ. ಅಂತರ್ಜಲದ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಇದರಿಂದ ನಗರದಲ್ಲಿರುವ ಅಂದಾಜು 4 ಲಕ್ಷ ಕೊಳವೆಬಾವಿಗಳಿಗೆ ಲಾಭವಾಗಿದೆ’ ಎಂದು ಜಲಮಂಡಳಿಯ ಅಧ್ಯಕ್ಷ ಟಿ.ಎಂ. ವಿಜಯಭಾಸ್ಕರ್‌ ಹೇಳಿದರು. ‘ಮಳೆ ನೀರು ವ್ಯವಸ್ಥೆ ಸಂಗ್ರಹಿಸಿಕೊಳ್ಳದ ಕಟ್ಟಡಗಳ ಮಾಲೀಕರಿಗೆ ಪ್ರತಿ ತಿಂಗಳ ನೀರಿನ ಬಿಲ್‌ನ ಶೇ 25ರಷ್ಟು ದಂಡ ವಿಧಿಸಲಾಗುವುದು. ಮೂರು ತಿಂಗಳ ಬಳಿಕವೂ ಅಳವಡಿಸಿಕೊಳ್ಳದಿದ್ದರೆ ಪ್ರತಿ ತಿಂಗಳು ಶೇ 50ರಷ್ಟು ದಂಡ ವಿಧಿಸಲಾಗುವುದು.

ಗೃಹೇತರ ಬಳಕೆದಾರರಿಗೆ ಮೊದಲ ಮೂರು ತಿಂಗಳು ನೀರಿನ ಬಿಲ್‌ನ ಶೇ 50ರಷ್ಟು ದಂಡ ವಿಧಿಸಲಾಗುವುದು. ಬಳಿಕ ಶೇ 100ರಷ್ಟು ದಂಡ ವಿಧಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿದೆ. ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳದ ಮನೆಗಳ ಪತ್ತೆಗೆ ಸಮೀಕ್ಷೆ ನಡೆಸಲಾಗುವುದು’ ಎಂದು ಅವರು ತಿಳಿಸಿದರು.

ನೀರಿನ ಅಭಾವ ನೀಗಿಸಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಪ್ರತಿ ಮನೆ ಹಾಗೂ ಕಟ್ಟಡಗಳಲ್ಲಿ ಮಳೆ ನೀರು ಕಡ್ಡಾಯವಾಗಿ ಸಂಗ್ರಹಿಸಬೇಕು ಎಂದು ಕಾನೂನು ರೂಪಿಸಲಾಗಿದೆ. ಭವಿಷ್ಯದಲ್ಲಿ ಉಂಟಾಗುವ ನೀರಿನ ಕೊರತೆಯನ್ನು ತಕ್ಕ ಮಟ್ಟಿಗೆ ನೀಗಿಸುವ ಉದ್ದೇಶದಿಂದ ಜಲಮಂಡಳಿ 2009ರಿಂದ ಮಳೆ ನೀರು ಸಂಗ್ರಹ ವ್ಯವಸ್ಥೆ  ಕಡ್ಡಾಯ ಮಾಡಿದೆ.  40x60 ನಿವೇಶನದ ಹಳೆಯ ಕಟ್ಟಡಗಳಿಗೆ ಹಾಗೂ ಹೊಸದಾಗಿ 30x40 ಮತ್ತು ಅದಕ್ಕಿಂತ ಹೆಚ್ಚಿನ ಕಟ್ಟಡಗಳಲ್ಲಿ ಮಳೆ ನೀರು ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಮಂಡಳಿ ಸೂಚಿಸಿತ್ತು.

2011ರ ಡಿಸೆಂಬರ್‌ ತಿಂಗಳೊಳಗೆ ಎಲ್ಲ ಮನೆಗಳಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು 2009ರಲ್ಲಿ ಗಡುವು ವಿಧಿಸಲಾಗಿತ್ತು. ಬಳಿಕ ಅದನ್ನು 2012ರ ಮೇ ತಿಂಗಳ ವರೆಗೆ ವಿಸ್ತರಿಸಲಾಗಿತ್ತು.  ಮಳೆ ನೀರು ವ್ಯವಸ್ಥೆ ಅಳವಡಿಸಿಕೊಳ್ಳದ ಮನೆಗಳ ನೀರಿನ ಸಂಪರ್ಕ ಕಡಿತ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ಬಳಿಕ ಕಟ್ಟಡ ಮಾಲೀಕರ ಬಗ್ಗೆ ಮಂಡಳಿ ಮೃದು ಧೋರಣೆ ತಳೆದಿತ್ತು. ಇದೀಗ ಮಂಡಳಿ ಅಧ್ಯಕ್ಷ ವಿಜಯ ಭಾಸ್ಕರ್‌ ಅವರು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.