ADVERTISEMENT

ದೂರಶಿಕ್ಷಣ ವಿಭಾಗದ ಫಲಿತಾಂಶಕ್ಕೆ ತಡೆ

ಬೆಂಗಳೂರು ವಿಶ್ವವಿದ್ಯಾಲಯದ ಅಕ್ರಮ ಮೌಲ್ಯಮಾಪನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2014, 19:30 IST
Last Updated 22 ಏಪ್ರಿಲ್ 2014, 19:30 IST
ದೂರಶಿಕ್ಷಣ ವಿಭಾಗದ ಫಲಿತಾಂಶಕ್ಕೆ ತಡೆ
ದೂರಶಿಕ್ಷಣ ವಿಭಾಗದ ಫಲಿತಾಂಶಕ್ಕೆ ತಡೆ   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಮೌಲ್ಯಮಾಪನದಲ್ಲಿ ಅಕ್ರಮ ನಡೆದಿರುವುದು ಬಹಿರಂಗಗೊಂಡ ಕಾರಣ ದೂರಶಿಕ್ಷಣ ವಿಭಾಗದ ಫಲಿತಾಂಶವನ್ನು ತಡೆ ಹಿಡಿಯಲು ವಿಶ್ವವಿದ್ಯಾಲಯ ನಿರ್ಧರಿಸಿದೆ.

ಮೌಲ್ಯಮಾಪನ ಅಕ್ರಮವನ್ನು ಹಲಸೂರು ಗೇಟ್‌ ಪೊಲೀಸರು ಸೋಮವಾರ ಪತ್ತೆ ಹಚ್ಚಿದ್ದರು. ಈ ಹಿನ್ನೆಲೆಯಲ್ಲಿ ವಿವಿಯ  ಕುಲ­ಸಚಿವ  (ಮೌಲ್ಯಮಾಪನ) ಪ್ರೊ.ಕೆ.ಎನ್‌. ನಿಂಗೇಗೌಡ ಅವರು ಮಂಗಳವಾರ ಕೇಂದ್ರ ವಿಭಾಗದ ಡಿಸಿಪಿ ಬಿ.ಆರ್.ರವಿಕಾಂತೇಗೌಡ ಅವರನ್ನು ಭೇಟಿ ಮಾಡಿ ಮೌಲ್ಯಮಾಪನ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದರು.

‘ಪ್ರಕರಣ ಸಂಬಂಧ ಕುಲಸಚಿವರು ಭೇಟಿ ಮಾಡಿ  ತನಿಖೆಗೆ ಸಂಪೂರ್ಣ ಸಹಕಾರ ನೀಡುವು­ದಾಗಿ ಹೇಳಿದ್ದಾರೆ. ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿರುವುದರಿಂದ ಮೌಲ್ಯಮಾಪಕರು ಹಾಗೂ ವಿ.ವಿಯ ಇತರೆ ಸಿಬ್ಬಂದಿಯ ಪಾತ್ರದ ಬಗ್ಗೆ ಈಗಲೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ’ ಎಂದು ಬಿ.ಆರ್.ರವಿಕಾಂತೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ದೂರಶಿಕ್ಷಣದಲ್ಲಿ ಅಕ್ರಮ: ‘ವಿವಿಯ ದೂರಶಿಕ್ಷಣ ವಿಭಾಗದಲ್ಲಿ ಈ ಅಕ್ರಮ ನಡೆದಿದೆ. ಕಳೆದ ತಿಂಗಳು ದೂರಶಿಕ್ಷಣ ವಿಭಾಗದ ಮೌಲ್ಯ­ಮಾಪನ ನಡೆದಿತ್ತು. ಅಂದಾಜು 45,000 ಉತ್ತರ ಪತ್ರಿಕೆ ಮೌಲ್ಯಮಾಪನ ನಡೆಸಲಾ­ಗಿತ್ತು. ಮೌಲ್ಯಮಾಪನ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿತ್ತು. ಈಗ ಸೆಂಟ್ರಲ್‌ ಕಾಲೇಜಿ­ನಲ್ಲಿರುವ ಮೌಲ್ಯಮಾಪನ ಕೇಂದ್ರಕ್ಕೆ ಬೀಗ ಹಾಕಲಾಗಿದೆ’ ಎಂದು ಪ್ರೊ.ಕೆ.ಎನ್‌.ನಿಂಗೇಗೌಡ ತಿಳಿಸಿದರು.

‘ಪೊಲೀಸ್‌ ತನಿಖಾ ವರದಿ ಸಿಗುವ ವರೆಗೆ ಫಲಿತಾಂಶವನ್ನು ತಡೆ ಹಿಡಿಯಲಾಗುವುದು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಆಗ­ಬಾ­ರದು ಎಂಬ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಮಾಹಿತಿ ನೀಡಿದರು.

‘ಪೊಲೀಸ್‌ ಇಲಾಖೆಯ ತನಿಖೆಗೆ ವಿಶ್ವ­ವಿದ್ಯಾಲಯ ಅಗತ್ಯ ಸಹಕಾರ ನೀಡಲಿದೆ. ವಿವಿ ಸಿಬ್ಬಂದಿ ಭಾಗಿಯಾಗಿದ್ದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಅಂತವರನ್ನು ವಜಾ ಮಾಡಲು ಸಹ ಹಿಂಜರಿ­ಯು­ವುದಿಲ್ಲ. ಇದೇ 25ರಂದು ನಡೆಯುವ ಸಿಂಡಿಕೇಟ್‌ ಸಭೆಯಲ್ಲಿ ಚರ್ಚಿಸಿ ಆಂತರಿಕ ತನಿಖಾ ತಂಡ ರಚಿಸಲಾಗುವುದು’ ಎಂದರು.

‘ಪ್ರಕರಣದ ಬಗ್ಗೆ ಉನ್ನತ ಶಿಕ್ಷಣ ಇಲಾಖೆಗೂ ಸಮಗ್ರ ಮಾಹಿತಿ ನೀಡಲಾಗಿದೆ’ ಎಂದರು.

ಆಂತರಿಕ ಸಮಿತಿ: ‘ಆರೋಪಿಗಳನ್ನು ಬಂಧಿಸುವ ಮೂಲಕ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ವಿವಿಯಲ್ಲಿನ ಲೋಪದೋಷ­ಗಳನ್ನು ತಿದ್ದಿಕೊಳ್ಳಲಾಗುವುದು. ವಿವಿಯ ಪರೀಕ್ಷಾ ಹಾಗೂ ಮೌಲ್ಯಮಾಪನ ವ್ಯವಸ್ಥೆಯ ಇನ್ನಷ್ಟು ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಈಗಿನ ಪ್ರಕರಣದ ತನಿಖೆಗೆ ವಿವಿಯಿಂದ ಆಂತರಿಕ ಸಮಿತಿ ರಚಿಸಿ ವರದಿ ತರಿಸಿಕೊಳ್ಳಲಾಗುವುದು’ ಎಂದು ಕುಲಪತಿ ಪ್ರೊ.ಬಿ.ತಿಮ್ಮೇಗೌಡ ತಿಳಿಸಿದರು.

ತನಿಖೆಗೆ ಸೂಚನೆ ದೇಶಪಾಂಡೆ
‘ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಮೌಲ್ಯಮಾಪನ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸೂಚಿಸಲಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ವಿ.ವಿ.ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್‌ ಅವರೊಂದಿಗೆ ಈಗಾಗಲೇ ಚರ್ಚೆ ನಡೆಸಿ ತನಿಖೆಗೆ ಆದೇಶಿಸಿರುವುದಾಗಿ ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT