ADVERTISEMENT

ದೂರು ದಾಖಲಿಸಲು ವೆಬ್‌ಸೈಟ್‌, ಆ್ಯಪ್‌ ಮೊರೆ

ಆರು ತಿಂಗಳಲ್ಲಿ 17,893 ಪ್ರಕರಣ ದಾಖಲು

ಸಂತೋಷ ಜಿಗಳಿಕೊಪ್ಪ
Published 23 ಜೂನ್ 2016, 20:23 IST
Last Updated 23 ಜೂನ್ 2016, 20:23 IST
ದೂರು ದಾಖಲಿಸಲು ವೆಬ್‌ಸೈಟ್‌, ಆ್ಯಪ್‌ ಮೊರೆ
ದೂರು ದಾಖಲಿಸಲು ವೆಬ್‌ಸೈಟ್‌, ಆ್ಯಪ್‌ ಮೊರೆ   

ಬೆಂಗಳೂರು: ಸಂಚಾರ ವ್ಯವಸ್ಥೆಗೆ ಸಂಬಂಧಪಟ್ಟ ದೂರು ಹಾಗೂ ಅಹವಾಲುಗಳನ್ನು ನೂತನ ತಂತ್ರಜ್ಞಾನಗಳ ಮೂಲಕ ಸಲ್ಲಿಸುತ್ತಿರುವ ಸಾರ್ವಜನಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ನಗರ ಸಂಚಾರ ಪೊಲೀಸರು ರೂಪಿಸಿರುವ ವೆಬ್‌ಸೈಟ್‌ ಹಾಗೂ ಆ್ಯಪ್‌ ಆಧರಿತ ದೂರು ಸಲ್ಲಿಕೆ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಂಕಿ– ಅಂಶಗಳ ಮೇಲೆ ಕಣ್ಣಾಡಿಸಿದರೆ ಗೊತ್ತಾಗುತ್ತದೆ.

‘ಐಟಿ ನಗರಿ ಎಂದೇ ಕರೆಯುವ ಬೆಂಗಳೂರಿನಲ್ಲಿ ಬಹುಪಾಲು ಜನರು ಠಾಣೆಗೆ ಹೋಗುವ ಬದಲು ‘ವೆಬ್‌ಸೈಟ್‌’ ಹಾಗೂ ‘ಆ್ಯಪ್‌’ ಮೂಲಕ ದೂರು ಸಲ್ಲಿಸಲು ಆಸಕ್ತಿ ತೋರುತ್ತಿದ್ದಾರೆ’ ಎಂದು ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಆರ್‌. ಹಿತೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಬ್ಲಿಕ್‌ ಐ’ ವೆಬ್‌ಸೈಟ್‌ ಹಾಗೂ ಆ್ಯಪ್‌,  ‘ಐ ಚೆಂಜ್‌ ಮೈ ಸಿಟಿ’ ಮತ್ತು ‘ಬಿ ಸೇಫ್‌’ ಆ್ಯಪ್‌ಗಳನ್ನು ದೂರು ಸ್ವೀಕರಿಸಲೆಂದು ರೂಪಿಸಲಾಗಿದೆ. ಅವುಗಳ ಮೂಲಕ  ಪ್ರಸಕ್ತ ವರ್ಷದ ಜನವರಿ 1ರಿಂದ ಜೂನ್‌ 23ರವರೆಗೆ 17,893 ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. ಜತೆಗೆ ಫೇಸ್‌ಬುಕ್‌, ಟ್ವಿಟರ್‌ ಹಾಗೂ ವಾಟ್ಸ್‌ಅಪ್‌ ಮೂಲಕ 97 ದೂರು ಬಂದಿವೆ’ ಎಂದು ಅವರು ಮಾಹಿತಿ ನೀಡಿದರು.

‘ಪ್ರತಿಯೊಂದು ದೂರುಗಳು ಸಂಚಾರ ನಿರ್ವಹಣಾ ಕೇಂದ್ರಕ್ಕೆ ಬರುತ್ತವೆ. ಅಲ್ಲಿಯ ಸಿಬ್ಬಂದಿ  ಸಂಬಂಧಪಟ್ಟವರಿಗೆ ದೂರುಗಳನ್ನು ರವಾನಿಸುತ್ತಾರೆ. ಬಳಿಕ ದೂರುದಾರರ ಸಮಸ್ಯೆಗೆ ತ್ವರಿತ ಸ್ಪಂದನೆ ದೊರೆಯುತ್ತದೆ’ ಎಂದು ಹಿತೇಂದ್ರ ವಿವರಿಸಿದರು.

‘ಬಿ ಸೇಫ್‌’ನಲ್ಲಿ 80 ಮಂದಿಗೆ ತುರ್ತು ಸಹಾಯ: ಆಟೊ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕಳೆದ ಮಾರ್ಚ್‌ನಲ್ಲಿ ಬಿಡುಗಡೆಗೊಳಿಸಿದ್ದ ‘ಬಿ–ಸೇಫ್‌’ ಆ್ಯಪ್‌ ಮೂಲಕ 80 ಮಂದಿಗೆ ತುರ್ತು ಸಹಾಯ ಮಾಡಲಾಗಿದೆ.

ಈ ಆ್ಯಪ್‌ನಲ್ಲಿರುವ ‘ಆತ್ಮ ರಕ್ಷಣೆ’ (ಎಸ್‌ಓಎಸ್‌) ಪ್ಯಾನಿಕ್‌ ಬಟನ್‌ ಮೂಲಕ ದಾಖಲಾಗಿದ್ದ 208 ದೂರುಗಳ ಪೈಕಿ ಅತೀ ಗಂಭೀರವಾದ 80 ದೂರುಗಳಲ್ಲಿ ಮಹಿಳೆಯರು, ಹಿರಿಯ ನಾಗರಿಕರ ಸಮಸ್ಯೆಯನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಗಿದೆ. 

‘ಶಿವಾಜಿನಗರ, ಆರ್‌.ಟಿ. ನಗರ ಒಳಗೊಂಡಂತೆ ವಿವಿಧ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಆಟೊ ಚಾಲಕರು ಕಿರುಕುಳ ನೀಡುತ್ತಿದ್ದ ಬಗ್ಗೆ ದೂರುಗಳು ಆ್ಯಪ್‌ ಮೂಲಕ ಬಂದಿದ್ದವು. ಸ್ಥಳಕ್ಕೆ ಹೋದ ಸಿಬ್ಬಂದಿ, ಆಟೊ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ’ ಎಂದು ಹಿತೇಂದ್ರ ತಿಳಿಸಿದರು.

‘ಐ ಚೆಂಜ್‌ ಮೈ ಸಿಟಿ’ ಕೊಡುಗೆ ಹೆಚ್ಚು: ನಗರದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ‘ಐ ಚೆಂಜ್‌ ಮೈ ಸಿಟಿ’ ಸ್ವಯಂ ಸೇವಾ ಸಂಸ್ಥೆಯು ರೂಪಿಸಿರುವ ‘ಆ್ಯಪ್‌’ನಿಂದಲೇ ಸಂಚಾರ ಸಮಸ್ಯೆಗಳ ಬಗ್ಗೆ ಹೆಚ್ಚಿನ ದೂರುಗಳು ದಾಖಲಾಗುತ್ತಿವೆ.

ಈ ಆ್ಯಪ್‌್ ಮೂಲಕವೇ ಇದುವರೆಗೆ ಒಟ್ಟು 11,613 ಪ್ರಕರಣಗಳನ್ನು ದಾಖಲಿಸಿಕೊಂಡು ಸಂಬಂಧಪಟ್ಟವರಿಗೆ ದಂಡ ವಿಧಿಸಲಾಗಿದೆ. ಕೆಲವರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಹಿತೇಂದ್ರ ಮಾಹಿತಿ ನೀಡಿದರು.
*
ದೂರುಗಳು ಏನೇನು?
* ನೋ ಪಾರ್ಕಿಂಗ್‌ ಜಾಗದಲ್ಲಿ ವಾಹನ ನಿಲುಗಡೆ

* ಜಿಬ್ರಾ ಕ್ರಾಸಿಂಗ್‌ನಲ್ಲಿ ವಾಹನ ನಿಲುಗಡೆ
* ಆಟೊ ಚಾಲಕರಿಂದ ಕಿರುಕುಳ, ಹೆಚ್ಚಿನ ದರಕ್ಕೆ ಬೇಡಿಕೆ, ಕರೆದಲ್ಲಿ ಬರದಿರುವುದು
* ಹೆಲ್ಮೆಟ್‌ ಧರಿಸದೆ ಬೈಕ್‌ ಸವಾರಿ
* ಫುಟ್‌ಪಾತ್‌ ಮೇಲೆ ವಾಹನ ಚಲಾಯಿಸುವುದು 
* ಪ್ರಯಾಣದ ವೇಳೆ ಚಾಲಕನ ಅಸಭ್ಯ ವರ್ತನೆ
* ರಸ್ತೆ ಒತ್ತುವರಿಯಿಂದ ಉಂಟಾದ ಸಂಚಾರ ದಟ್ಟಣೆ
*
ಪ್ರತಿಯೊಂದು ದೂರಿಗೂ ತ್ವರಿತವಾಗಿ ಕಾನೂನುರೀತ್ಯ ಕ್ರಮ ಜರುಗಿಸುತ್ತೇವೆ. ಸುಗಮ ಸಂಚಾರವೇ ನಮ್ಮ ಗುರಿಯಾಗಿದ್ದು, ಸಾರ್ವಜನಿಕರು ಆತಂಕ ಪಡದೆ ದೂರು ನೀಡಬೇಕು.
-ಆರ್‌. ಹಿತೇಂದ್ರ,
ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT