ADVERTISEMENT

‘ದೇಶದಲ್ಲಿ ಎಡಪಕ್ಷಗಳು ದುರ್ಬಲ’

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 19:56 IST
Last Updated 18 ಜನವರಿ 2017, 19:56 IST
‘ದೇಶದಲ್ಲಿ ಎಡಪಕ್ಷಗಳು ದುರ್ಬಲ’
‘ದೇಶದಲ್ಲಿ ಎಡಪಕ್ಷಗಳು ದುರ್ಬಲ’   

ಬೆಂಗಳೂರು: ‘ರಾಷ್ಟ್ರ ರಾಜಕಾರಣದಲ್ಲಿ ಎಡಪಕ್ಷಗಳ ಶಕ್ತಿ ದುರ್ಬಲವಾಗಿದೆ. ಆದರೆ, ಭವಿಷ್ಯ ಹೀಗೆಯೇ ಇರುವುದಿಲ್ಲ. ಖಂಡಿತಾ ಪರಿಸ್ಥಿತಿ ಬದಲಾಗುತ್ತದೆ’ ಎಂದು ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಆಶಾಭಾವ ವ್ಯಕ್ತಪಡಿಸಿದರು.

ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಪತ್ರಕರ್ತರ ಜೊತೆ ಸಂವಾದ ನಡೆಸಿದ ಅವರು, ‘ಸಿಪಿಐ, ಸಿಪಿಎಂ, ಫಾರ್ವರ್ಡ್ ಬ್ಲಾಕ್‌ನಂತಹ ಎಡಪಂಥೀಯ ಧೋರಣೆಯ ಪಕ್ಷಗಳು ಸಮಾನ ವಿಚಾರಧಾರೆಯ ಮೇಲೆ ಕೆಲಸ ಮಾಡುತ್ತಿವೆ. ಆದರೆ, ಅವುಗಳ ದನಿ ಕ್ಷೀಣವಾಗಿದೆ’ ಎಂದರು.

‘ದೇಶದಲ್ಲಿ ಸಹಕಾರಿ ತತ್ವಗಳ ಆಧಾರದಲ್ಲಿ ಕೃಷಿ ಪದ್ಧತಿ ಜಾರಿಗೊಳಿಸುವುದು ಕಷ್ಟವಿದೆ. ನಮ್ಮ ರೈತರಲ್ಲಿ ಪ್ರಯೋಗಶೀಲತೆ ಕಡಿಮೆ.  ಹೊಸ ಪದ್ಧತಿಗಳಿಗೆ ಅಂದುಕೊಂಡಷ್ಟು  ಬೇಗೆ ಒಗ್ಗಿಕೊಳ್ಳುವುದಿಲ್ಲ. ಅವರಿನ್ನೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಬ್ಸಿಡಿ ಋಣದಲ್ಲಿಯೇ ಇದ್ದಾರೆ’ ಎಂದು ವಿಷಾದಿಸಿದರು.

‘ಜನರ ಮೂಲ ಸಮಸ್ಯೆಗಳನ್ನು ಬದಿಗೊತ್ತಿರುವ ಕೇಂದ್ರ ಸರ್ಕಾರ ಜಾತಿ, ಧರ್ಮ, ಪಂಥಗಳ ಆಧಾರದಲ್ಲಿ ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ’ ಎಂದು  ಅವರು ಆರೋಪಿಸಿದರು.

‘ಚುನಾವಣೆಗೂ ಮುನ್ನ ಬಿಜೆಪಿ ಸರ್ಕಾರ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಬದಲಿಗೆ ದೇಶದ ಅರ್ಥ ವ್ಯವಸ್ಥೆ ಮತ್ತು ಆಡಳಿತ ಹಿಮ್ಮುಖವಾಗಿ ಚಲಿಸುತ್ತಿದೆ. ದೇಶ ಕ್ರಮೇಣ ಹಣವಂತರ ಮುಷ್ಟಿಯಲ್ಲಿ ಸಿಲುಕುತ್ತಿದೆ.  ಆಳುವ ಸರ್ಕಾರಗಳು ಕಾರ್ಪೊರೇಟ್‌ ಸಂಸ್ಥೆಗಳ ನಿಯಂತ್ರಣಕ್ಕೆ ಒಳಗಾಗಿವೆ. ಈ ಪರಿಸ್ಥಿತಿ ಹೀಗೆಯೇ ಇರುವುದಿಲ್ಲ. ಶೀಘ್ರದಲ್ಲೇ ಬದಲಾಗಿ ಉತ್ತಮ ಸರ್ಕಾರ ದೇಶವನ್ನು ಮುನ್ನಡೆಸುತ್ತದೆ’  ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.