ADVERTISEMENT

ನಂದಿನಿ ಹಾಲಿನ ಪಾಕೆಟ್‌ನಲ್ಲಿ ಜಿರಳೆ ಪತ್ತೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 19:30 IST
Last Updated 16 ಡಿಸೆಂಬರ್ 2017, 19:30 IST
ಹಾಲಿನ ಪಾಕೆಟ್‌ನಲ್ಲಿದ್ದ ಜಿರಳೆ
ಹಾಲಿನ ಪಾಕೆಟ್‌ನಲ್ಲಿದ್ದ ಜಿರಳೆ   

ಬೆಂಗಳೂರು: ಹೆಗಡೆನಗರದ ಮಾತೃಶ್ರೀ ಪ್ರಾವಿಜನ್‌ ಸ್ಟೋರ್‌ನಲ್ಲಿ ಶನಿವಾರ ಮಾರಾಟಕ್ಕೆ ಇರಿಸಿದ್ದ ನಂದಿನಿ ಹಾಲಿನ ಪಾಕೆಟ್‌ನಲ್ಲಿ ಜಿರಳೆ ಪತ್ತೆಯಾಗಿದೆ.

ಈ ಬಗ್ಗೆ ಸ್ಟೋರ್‌ ಮಾಲೀಕ ಪ್ರಭಾಕರ್‌, ಪಾಕೆಟ್‌ ಸಮೇತ ನಂದಿನಿ ಹಾಲು ಮಾರಾಟದ ಏಜೆಂಟ್‌ ಸಂತೋಷ್‌ ಎಂಬುವರಿಗೆ ಮಾಹಿತಿ ನೀಡಿದ್ದಾರೆ. 

‘ನಿತ್ಯವೂ ಬೆಳಿಗ್ಗೆ ಹಾಗೂ ಸಂಜೆ ಹಾಲಿನ ಪಾಕೆಟ್‌ ಮಾರಾಟ ಮಾಡುತ್ತೇನೆ. ಶನಿವಾರ ಮಧ್ಯಾಹ್ನ 1.30 ಗಂಟೆಯ ಸುಮಾರಿಗೆ ಏಜೆಂಟ್‌, ಹಾಲಿನ ಪಾಕೆಟ್‌ಗಳನ್ನು ಕೊಟ್ಟು ಹೋಗಿದ್ದರು. ಅದರಲ್ಲೇ ಅರ್ಧ ಲೀಟರ್‌ನ ಒಂದು ಪಾಕೆಟ್‌ನಲ್ಲಿ ಜಿರಳೆ ಇರುವುದು ಗೊತ್ತಾಯಿತು’ ಎಂದು ಪ್ರಭಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮಾರಾಟ ವೇಳೆಯೇ ಜಿರಳೆ ಕಾಣಿಸಿದ್ದರಿಂದ, ಗ್ರಾಹಕರು ಬೈಯ್ದು ಹೋದರು. ಬಳಿಕವೇ ಸಂತೋಷ್‌ ಅವರಿಗೆ ಮಾಹಿತಿ ತಿಳಿಸಿದೆ. ರಾತ್ರಿಯವರೆಗೂ ನಂದಿನಿ ಕಂಪೆನಿಯ ಯಾರೊಬ್ಬರೂ ನನ್ನನ್ನು ಸಂಪರ್ಕಿಸಿಲ್ಲ. ಇಂಥ ಪಾಕೆಟ್‌ ಮಾರಿದ ಬಳಿಕ ಗ್ರಾಹಕರಿಗೆ ಏನಾದರೂ ತೊಂದರೆಯಾದರೆ ಯಾರು ಹೊಣೆ’ ಎಂದು ಅವರು ಪ್ರಶ್ನಿಸಿದರು. 

‘ಯಲಹಂಕದ ಮದರ್ ಡೇರಿಯಲ್ಲಿ ಈ ಪಾಕೆಟ್‌ ಸಿದ್ಧಪಡಿಸಲಾಗಿದ್ದು, ಆ ಡೇರಿಯನ್ನು ಅಧಿಕಾರಿಗಳು ತಪಾಸಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.