ADVERTISEMENT

ನಗರದ ಮೊದಲ ಕ್ಯಾಬ್ ಚಾಲಕಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2016, 19:30 IST
Last Updated 28 ಜೂನ್ 2016, 19:30 IST
ವಿ.ಭಾರತಿ
ವಿ.ಭಾರತಿ   

ಬೆಂಗಳೂರು: ನಗರದ ಮೊದಲ ಕ್ಯಾಬ್ ಡ್ರೈವರ್ ಎಂಬ ಹೆಗ್ಗಳಿಕೆ ಹೊಂದಿದ್ದ ವಿ.ಭಾರತಿ (39)  ಸೋಮವಾರ ರಾತ್ರಿ ನಾಗಶೆಟ್ಟಿಹಳ್ಳಿ ಸಮೀಪದ ನಾರಾಯಣಪ್ಪ ಲೇಔಟ್‌ನ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಂಧ್ರ ಪ್ರದೇಶದ ಗುಂಟೂರು ಮೂಲದ ಭಾರತಿ, ಉಬರ್ ಸಂಸ್ಥೆಯಲ್ಲಿ ಕ್ಯಾಬ್ ಚಾಲಕರಾಗಿದ್ದರು. ಕೆಲಸ ಮುಗಿಸಿಕೊಂಡು ರಾತ್ರಿ 7 ಗಂಟೆಗೆ ಮನೆಗೆ ಮರಳಿದ್ದ ಅವರು, ನೇಣು ಹಾಕಿಕೊಂಡಿದ್ದಾರೆ. ಪರಿಚಿತ ಮಹಿಳೆ ರಾತ್ರಿ 8.30ಕ್ಕೆ ಅವರ ಮನೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಎಂಟು ವರ್ಷಗಳ ಹಿಂದೆ ತಂದೆ–ತಾಯಿಯನ್ನು ಕಳೆದುಕೊಂಡ ಭಾರತಿ, ಗುಂಟೂರಿನಲ್ಲೇ ಅಕ್ಕ ಸರಳಾ ದೇವಿ ಜತೆ ವಾಸವಾಗಿದ್ದರು. 2010ರಲ್ಲಿ ನಗರಕ್ಕೆ ಬಂದು ಹಲಸೂರಿನಲ್ಲಿ ಬಾಡಿಗೆ ಮನೆ ಪಡೆದು ಒಂಟಿಯಾಗಿ ನೆಲೆಸಿದ್ದರು. 10 ತಿಂಗಳ ಹಿಂದಷ್ಟೇ ನಾಗಶೆಟ್ಟಿಹಳ್ಳಿಗೆ ವಾಸ್ತವ್ಯ ಬದಲಿಸಿದ್ದರು.
ಅವಿವಾಹಿತರಾಗಿದ್ದ ಭಾರತಿ, ನಗರಕ್ಕೆ ಬಂದ ಆರಂಭದಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆ ನಂತರ ಉಬರ್ ಸಂಸ್ಥೆ ಸೇರಿದ್ದರು. ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಸಂಜಯನಗರ ಪೊಲೀಸರು ತಿಳಿಸಿದ್ದಾರೆ.

‘ಭಾರತಿ ಶಿಸ್ತಿನ ಮಹಿಳೆಯಾಗಿದ್ದರು. ಕಷ್ಟದಲ್ಲಿರುವವರಿಗೆ ನೆರವಾಗುವ ಗುಣ ಅವರಲ್ಲಿತ್ತು. ಆದರೆ, ಎರಡು ದಿನಗಳಿಂದ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದರು. ಆ ಬಗ್ಗೆ ವಿಚಾರಿಸಿದರೆ ಏನೂ ಹೇಳಿಕೊಂಡಿರಲಿಲ್ಲ’ ಎಂದು ಮನೆ ಮಾಲೀಕ ಶಂಕರ್‌ಸಿಂಗ್ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.

‘ಒಳ್ಳೆಯ ಹುಡುಗನನ್ನು ನೋಡಿ ಮದುವೆ ಆಗುವಂತೆ ಭಾರತಿಗೆ ಹೇಳುತ್ತಿದ್ದೆವು. ಆದರೆ ಯಾವುದೇ ಕಾರಣಕ್ಕೂ ವಿವಾಹವಾಗುವುದಿಲ್ಲ ಎನ್ನುತ್ತಿದ್ದ ಅವರು, ಗುಂಟೂರಿಗೆ ಮರಳಿ ಅಕ್ಕನ ಕುಟುಂಬದ ಜತೆ ಇರುವುದಾಗಿ ಹೇಳುತ್ತಿದ್ದರು. ಸ್ವಂತ ಕಾರು ಖರೀದಿಸಲು ಬ್ಯಾಂಕ್‌ನಲ್ಲಿ ಸಾಲ ಪಡೆಯಲು ಓಡಾಡುತ್ತಿದ್ದರು’ ಎಂದು ಸ್ಥಳೀಯರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.