ADVERTISEMENT

ನಗರ ಜಿಲ್ಲಾಡಳಿತ– ಕೆಪಿಎಲ್‌ಸಿ ತಿಕ್ಕಾಟ

ಕೆಲವು ಕಡೆ ಒತ್ತುವರಿ ತೆರವು ಕಾರ್ಯಾಚರಣೆ ನಡೆದೇ ಇಲ್ಲ: ಸಾರ್ವಜನಿಕ ಜಮೀನುಗಳ ನಿಗಮ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 19:56 IST
Last Updated 5 ಅಕ್ಟೋಬರ್ 2015, 19:56 IST
ಬಾಣಸವಾಡಿ ಕೆರೆ ಜಾಗದಲ್ಲಿ ನಡೆದ ತೆರವು ಕಾರ್ಯಾಚರಣೆ (ಸಂಗ್ರಹ ಚಿತ್ರ)
ಬಾಣಸವಾಡಿ ಕೆರೆ ಜಾಗದಲ್ಲಿ ನಡೆದ ತೆರವು ಕಾರ್ಯಾಚರಣೆ (ಸಂಗ್ರಹ ಚಿತ್ರ)   

ಬೆಂಗಳೂರು: ನಗರ ಜಿಲ್ಲೆಯಲ್ಲಿ ಸರ್ಕಾರಿ ಭೂಮಿಗಳ ಒತ್ತುವರಿ ತೆರವು ವಿಷಯವು ನಗರ ಜಿಲ್ಲಾಡಳಿತ ಹಾಗೂ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ (ಕೆಪಿಎಲ್‌ಸಿ) ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.

ವಿ.ಶಂಕರ್‌ ಅವರು ನಗರ ಜಿಲ್ಲಾಧಿ ಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜಿಲ್ಲೆಯಲ್ಲಿ 2014ರ ಆಗಸ್ಟ್‌ನಿಂದ 2015ರ ಮೇ ತಿಂಗಳ ವರೆಗೆ 4 ಸಾವಿರ  ಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಲಾಗಿದೆ. ಸಾರಕ್ಕಿ ಕೆರೆಯ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಹಲವು ಮನೆ, ವಾಣಿಜ್ಯ ಸಂಕೀರ್ಣಗಳನ್ನು ನೆಲಸಮ ಮಾಡಲಾಗಿತ್ತು. ಈ ಅವಧಿಯಲ್ಲಿ ಸುಮಾರು 20ಕ್ಕೂ ಅಧಿಕ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿತ್ತು.

ಈ ನಡುವೆ, ಒತ್ತುವರಿ ಕಾರ್ಯಾ ಚರಣೆ ನಡೆದ ಪ್ರದೇಶಗಳಿಗೆ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ಭೇಟಿ ನೀಡಿ ಪರಿಶೀಲನೆ ನಡೆಸಿದೆ.  ಸರ್ಕಾರಿ ಭೂಮಿಗಳ ಮೇಲ್ವಿಚಾರಣೆಯ ಹೊಣೆ ಹೊತ್ತಿರುವ ಸಂಸ್ಥೆ ಜಿಲ್ಲೆಯ 52 ಕಡೆಗಳಿಗೆ ಭೇಟಿ ನೀಡಿದೆ. ‘ಕೆಲವು ಕಡೆಗಳಲ್ಲಿ ತೆರವು ಕಾರ್ಯಾಚರಣೆ ನಡೆದೇ ಇಲ್ಲ. ತೆರವು ಕಾರ್ಯಾಚರಣೆ ನಡೆದಿದೆ ಎಂಬ ಸುಳ್ಳು ಹೇಳಲಾಗಿದೆ’ ಎಂದು ನಿಗಮ ಪ್ರತಿಪಾದಿಸಿದೆ. ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಜಿಲ್ಲಾಡಳಿತದ ಲೋಪ ಹಾಗೂ ತಪ್ಪುಗಳ  ಬಗ್ಗೆ ನಿಗಮವು ರಾಜ್ಯ ಸರ್ಕಾರಕ್ಕೆ ಸೆ. 18 ರಂದು ವಿಸ್ತೃತ ವರದಿ ಸಲ್ಲಿಸಿದೆ.

ವಿಶೇಷವೆಂದರೆ, ಕೆ.ಜಿ. ರಸ್ತೆಯ ಕಂದಾಯ ಭವನದ ಹಿಂಭಾಗದ ಕಟ್ಟಡದಲ್ಲಿ ನಿಗಮದ ಕಚೇರಿ ಎರಡನೇ ಮಹಡಿಯಲ್ಲಿದ್ದರೆ, ಜಿಲ್ಲಾಧಿಕಾರಿ ಅವರ ಕಚೇರಿ ಇರುವುದು ಮೊದಲನೇ ಮಹಡಿಯಲ್ಲಿ!

ನಿಗಮದ ವರದಿ: ‘ಜಿಲ್ಲಾಡಳಿತ ಒತ್ತುವರಿ ತೆರವಿನ ವರದಿಗಳನ್ನು ನಿಗಮಕ್ಕೆ ಕಳುಹಿಸುತ್ತಿತ್ತು.  ತೆರವಾದ ಭೂಮಿಗಳಿಗೆ ಬೇಲಿ ಹಾಕಿ ರಕ್ಷಣೆಗೆ ಮುಂದಾಯಿತು. ಈ ಸಂದರ್ಭದಲ್ಲಿ ವಾಸ್ತವ ಚಿತ್ರ ಬೆಳಕಿಗೆ ಬಂತು. ಒತ್ತುವರಿ ತೆರವು ನಡೆದ ಕುರುಹೇ ಇಲ್ಲ ಹಾಗೂ ಕಟ್ಟಡಗಳನ್ನು ನೆಲಸಮ ಮಾಡಿಲ್ಲ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಆರಂಭದಲ್ಲಿ ಬೆರಳೆಣಿಕೆಯ ಸ್ಥಳಗಳಿಗೆ ಭೇಟಿ ನೀಡಲಾಯಿತು. ಸತ್ಯ ಸಂಗತಿ ಬೆಳಕಿಗೆ ಬಂದ ಬಳಿಕ ಇನ್ನಷ್ಟು ಸ್ಥಳಗಳಿಗೆ ಭೇಟಿ ನೀಡಲಾಯಿತು. ಜಿಲ್ಲಾಡಳಿತ ಹೇಳಿದ್ದಕ್ಕಿಂತ ವಿಭಿನ್ನ ಚಿತ್ರಣ ಅಲ್ಲಿತ್ತು. ಕೆಲವು ಪ್ರಕರಣಗಳಲ್ಲಿ ಜಿಲ್ಲಾಡಳಿತ ಸುಳ್ಳು ಹೇಳಿದೆ ಎಂದು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ’ ಎಂದು ನಿಗಮದ ಮೂಲಗಳು ತಿಳಿಸಿವೆ.

‘ಒತ್ತುವರಿ ತೆರವು ಮಾಡಲಾಗಿದೆ ಎಂದು ರಾಜ್ಯ ಸರ್ಕಾರ, ಹೈಕೋರ್ಟ್‌ಗೆ ಜಿಲ್ಲಾಡಳಿತ ತಿಳಿಸಿದೆ. ಕೆಲವು ಪ್ರಕರಣಗಳಲ್ಲಿ ಒತ್ತುವರಿಯನ್ನು ಸಂಪೂರ್ಣ ತೆರವು ಮಾಡಿಲ್ಲ. ಇನ್ನೂ ಕೆಲವು ಜಾಗ ಸರ್ಕಾರದ ವಶದಲ್ಲಿ ಇಲ್ಲ.  ಒಂದು ಕಡೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ.

ಇನ್ನೊಂದು ಕಡೆ ಅದೇ ಸ್ಥಳದಲ್ಲಿ ಒತ್ತುವರಿದಾರರು ಒತ್ತುವರಿ ಮುಂದುವರಿಸಿದ್ದಾರೆ. ಇದರಿಂದ ತೆರವು ಕಾರ್ಯಾಚರಣೆಯ ಮೂಲ ಆಶಯಕ್ಕೆ ಭಂಗ ಬಂದಿದೆ’ ಎಂದು ವರದಿಯಲ್ಲಿ ಬೆಳಕು ಚೆಲ್ಲಲಾಗಿದೆ. ಇಂತಹ ಪ್ರಕರಣಗಳ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ನಿಗಮ ವಿನಂತಿಸಿದೆ.

ಈ ಪ್ರದೇಶಗಳಿಗೆ ಜಿಲ್ಲಾಡಳಿತದ ಅಧಿಕಾರಿಗಳು ಇನ್ನೊಮ್ಮೆ ಭೇಟಿ ನೀಡಬೇಕು. ಅಲ್ಲಿನ ಒತ್ತುವರಿ ತೆರವು ಮಾಡಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಜಿಲ್ಲಾಡಳಿತದ ವಾದ: ‘ಎಲ್ಲ ಪ್ರಕರಣಗಳಲ್ಲಿ ಜಿಲ್ಲಾಡಳಿತ ಒತ್ತುವರಿ ತೆರವು ಮಾಡಿ ಬೇಲಿ ಹಾಕಿದೆ.  ಸರ್ಕಾರಿ ಭೂಮಿ ಎಂಬ ಫಲಕ ಹಾಕಲಾಗಿದೆ. ಸರ್ಕಾರಿ ಭೂಮಿಗಳೆಂದು ದಾಖಲೆ ಸಿದ್ಧಪಡಿಸಲಾಗಿದೆ. ಯಾರೋ ಬೇಲಿ ಕಿತ್ತು ಎಸೆದರು ಎಂಬ ಕಾರಣಕ್ಕೆ ತೆರವು ಕಾರ್ಯಾಚರಣೆ ನಡೆದೇ ಇಲ್ಲ ಎಂದು ಹೇಳುತ್ತಿದ್ದಾರೆ. ಇಂತಹ ಧೋರಣೆ ಸರಿಯಲ್ಲ’ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಸರ್ಕಾರಿ ಭೂಮಿಗಳ ಸಂರಕ್ಷಣೆ ನಿಗಮದ ಜವಾಬ್ದಾರಿ. ತೆರವು ಕಾರ್ಯಾಚರಣೆ ನಡೆದ ದಿನವೇ ನಿಗಮಕ್ಕೆ ವರದಿ ಕಳುಹಿಸಲಾಗಿದೆ. ಜಿಲ್ಲಾಡಳಿತದಷ್ಟೇ ಹೊಣೆ ನಿಗಮಕ್ಕೆ ಇದೆ. ಕಳೆದೊಂದು ವರ್ಷದಲ್ಲಿ ಮೌನವಾಗಿದ್ದ ನಿಗಮ ಈಗ ಏಕಾಏಕಿ ಧ್ವನಿ ಎತ್ತಿದ್ದು ಏಕೆ’ ಎಂದು ಅವರು ಪ್ರಶ್ನಿಸಿದರು.

‘ಜಿಲ್ಲಾಡಳಿತ ತೆರವು ಕಾರ್ಯಾಚರಣೆ ನಡೆಸಿದೆ. ತೆರವು ನಡೆಸಿದ ಜಾಗವನ್ನು ಮತ್ತೆ ಒತ್ತುವರಿ ಮಾಡಿದರೆ ನಾವೇನು ಮಾಡಲು ಸಾಧ್ಯ. ಪ್ರತಿದಿನ ನಾವು ಅಲ್ಲಿ ಕಾಯುತ್ತಾ ಕುಳಿತುಕೊಳ್ಳಲು ಸಾಧ್ಯವೇ’ ಎಂದು ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ಪ್ರಶ್ನಿಸಿದರು. ‘ಜಿಲ್ಲಾಡಳಿತ ಕಳೆದೊಂದು ವರ್ಷದಲ್ಲಿ ನೂರಾರು ಕಡೆ ತೆರವು ಕಾರ್ಯಾಚರಣೆ ನಡೆಸಿದೆ. 2–3 ಪ್ರಕರಣಗಳಲ್ಲಿ ಮತ್ತೆ ಒತ್ತುವರಿ ನಡೆದಿರಬಹುದು’ ಎಂದು ಅವರು ವಿಶ್ಲೇಷಿಸಿದರು.

‘ಒತ್ತುವರಿ ತೆರವು ಮಾಡಿದ ಬಳಿಕ ನಿರ್ದಿಷ್ಟ ಇಲಾಖೆಗೆ ಜಾಗ ಹಸ್ತಾಂತರ ಮಾಡಲಾಗುತ್ತದೆ. ಜಾಗಗಳ ರಕ್ಷಣೆ ಮಾಡುವುದು ಆಯಾ ಇಲಾಖೆಗಳ ಜವಾಬ್ದಾರಿ. ಭೂಮಿಗಳ ಸಂರಕ್ಷಣೆ ವಿಷಯದಲ್ಲಿ ಜಮೀನುಗಳ ನಿಗಮಕ್ಕೂ ಜವಾಬ್ದಾರಿ ಇದೆ. ಒತ್ತುವರಿ ತೆರವು ಹಾಗೂ ಸಂರಕ್ಷಣೆ ಕೇವಲ ಜಿಲ್ಲಾಡಳಿತದ ಜವಾಬ್ದಾರಿ ಇಲ್ಲ’ ಎಂದು ಅವರು ತಿರುಗೇಟು ನೀಡಿದರು.

*
* ಪ್ರಕರಣ 1: ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಮಿಣಿಕೆಯ ಸರ್ವೆ ಸಂಖ್ಯೆ 41 ಹಾಗೂ 42ರಲ್ಲಿ 30 ಎಕರೆ ಒತ್ತುವರಿಯಾಗಿತ್ತು. 30 ಎಕರೆ ಒತ್ತುವರಿ ತೆರವು ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿತ್ತು. ಆದರೆ, ಈ ಜಾಗದಲ್ಲಿ ಯಾವುದೇ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿಲ್ಲ ಎಂದು ನಿಗಮ ವಾದಿಸಿದೆ.

* ಪ್ರಕರಣ 2: ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಚುದೇನಪುರದ ಸರ್ವೆ ಸಂಖ್ಯೆ 12ರಲ್ಲಿ 1 ಎಕರೆ 20 ಗುಂಟೆಯ ಒತ್ತುವರಿ ತೆರವು ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿತ್ತು. ಈ ಪ್ರದೇಶದಲ್ಲಿ 21 ಗುಂಟೆಯನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ನಿಗಮ ಹೇಳಿದೆ.

* ಪ್ರಕರಣ 3: ಸೋಮನಹಳ್ಳಿ ಸರ್ವೆ ಸಂಖ್ಯೆ 225ರಲ್ಲಿ ಶಿಕ್ಷಣ ಸಂಸ್ಥೆಯೊಂದು ಮಾಡಿದ್ದ 33 ಎಕರೆ ಒತ್ತುವರಿಯನ್ನು ತೆರವು ಮಾಡಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಿಸಿತ್ತು. ಈ ಜಾಗ ಈಗಲೂ ಒತ್ತುವರಿಯಾಗಿದೆ. ಅಲ್ಲದೆ, ತಡೆಗೋಡೆ ಒಡೆದು ಹಾಕಿದ ಜಾಗದಲ್ಲಿ ಮತ್ತೆ ತಡೆಗೋಡೆ ತಲೆ ಎತ್ತಿದೆ. ಈ ವಿಷಯ ಈಗ ನ್ಯಾಯಾಲಯದಲ್ಲಿದ್ದು, ಜಿಲ್ಲಾಡಳಿತ ಪರಿಣಾಮಕಾರಿಯಾಗಿ ವಾದ ಮಂಡಿಸಬೇಕು ಎಂದು ನಿಗಮ ಸಲಹೆ ನೀಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT