ADVERTISEMENT

ನವಜಾತ ಶಿಶು ಕದ್ದಿದ್ದ ದಂಪತಿ ಬಂಧನ

ಲಕ್ಷದ ಆಸೆಗೆ 4 ದಿನಗಳ ಮಗು ಅಪಹರಣ

​ಪ್ರಜಾವಾಣಿ ವಾರ್ತೆ
Published 2 ಮೇ 2016, 19:48 IST
Last Updated 2 ಮೇ 2016, 19:48 IST
ನವಜಾತ ಶಿಶು ಕದ್ದಿದ್ದ ದಂಪತಿ ಬಂಧನ
ನವಜಾತ ಶಿಶು ಕದ್ದಿದ್ದ ದಂಪತಿ ಬಂಧನ   

ಬೆಂಗಳೂರು: ಶಿವಾಜಿನಗರದ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಯಿಂದ 4 ದಿನದ ಶಿಶುವನ್ನು ಅಪಹರಿಸಿದ್ದ ಪ್ರಕರಣ ಸಂಬಂಧ ಡಿ.ಜೆ. ಹಳ್ಳಿ ಮೂಲದ ದಂಪತಿಯನ್ನು  ಪೊಲೀಸರು ಬಂಧಿಸಿದ್ದಾರೆ.

ಸೈಯದ್‌ ನೂರ್‌ (32), ಜಬೀನಾ (28) ಬಂಧಿತರಾಗಿದ್ದು, ಅವರನ್ನು ಕೋಲಾರದ ಪ್ರಾರ್ಥನಾ ಮಂದಿರದಲ್ಲಿ ಭಿಕ್ಷೆ ಬೇಡುತ್ತಿದ್ದ ವೇಳೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೌರಿಂಗ್‌ ಆಸ್ಪತ್ರೆಯಲ್ಲಿ ಫರೀದಾ ಎಂಬುವವರಿಗೆ ಜನಿಸಿದ್ದ  ಗಂಡು ಮಗುವನ್ನು 2015ರ ಅಕ್ಟೋಬರ್‌ 4ರಂದು ಅಪಹರಿಸಲಾಗಿತ್ತು. ಆ ಕುರಿತು ಬೌರಿಂಗ್‌ ಆಸ್ಪತ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ತನಿಖೆ ನಡೆಸಿ ಅಪಹರಣವಾಗಿದ್ದ ಮಗುವನ್ನು ದತ್ತು ಪಡೆದಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ್‌ ತಾಲ್ಲೂಕಿನ ಕಾಗೇಹಳ್ಳಿ ಗ್ರಾಮದ ಸೈಯದ್‌ ಕರೀಂ ಹಾಗೂ ಶಬಾನಾ ಎಂಬುವವರನ್ನು ಬಂಧಿಸಲಾಗಿತ್ತು. ಮಗುವನ್ನು ಸುರಕ್ಷಿತವಾಗಿ ತಾಯಿ ಫರೀದಾ ಅವರಿಗೆ ಹಸ್ತಾಂತರಿಸಲಾಗಿತ್ತು. ಆದರೆ ಅಪಹರಣದ ಪ್ರಮುಖ ಆರೋಪಿಗಳು ಪತ್ತೆಯಾಗಿರಲಿಲ್ಲ.

ಇತ್ತೀಚೆಗೆ ಕೋಲಾರದಲ್ಲಿ ಆರೋಪಿಗಳು ತಂಗಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಅಲ್ಲೀಗೆ ತೆರಳಿದ್ದ ತಂಡವು ಸೈಯದ್‌ ನೂರ್‌್ ಹಾಗೂ ಜಬೀನಾ ಅವರನ್ನು ಬಂಧಿಸಿದೆ ಎಂದು ಪೊಲೀಸರು ವಿವರಿಸಿದರು.

ಈ ಹಿಂದೆಯೂ ಸಂಬಂಧಿಕರೊಬ್ಬರನ್ನು ಪುಸಲಾಯಿಸಿದ್ದ ಆರೋಪಿಗಳು ಅವರ ವರ್ಷದ ಮಗುವನ್ನು ಕರೆದುಕೊಂಡು ಹೋಗಿ ಬೇರೆ ದಂಪತಿಗೆ ದತ್ತು ನೀಡಿದ್ದರು. ಅದಕ್ಕೆ ಪ್ರತಿಫಲವಾಗಿ ₹1 ಲಕ್ಷ  ನಗದು ಪಡೆದುಕೊಂಡಿದ್ದರು. ಹಣವೆಲ್ಲ ಖರ್ಚಾದ ಬಳಿಕ ಮತ್ತೊಂದು ಮಗುವನ್ನು ಅಪಹರಿಸಿ ದತ್ತು ನೀಡಿದರೆ ಮತ್ತೆ 1 ಲಕ್ಷ ಸಿಗುತ್ತದೆ ಎಂದು ಯೋಚಿಸಿದ್ದ ಸೈಯದ್‌ ನೂರ್‌ ಹಾಗೂ ಜಬೀನಾ, ಬೌರಿಂಗ್‌ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಅಪಹರಿಸಿದ್ದರು’ ಎಂದು ಪೊಲೀಸರು ಹೇಳಿದರು.

ಭಿಕ್ಷೆ ಬೇಡುತ್ತಿದ್ದ ದಂಪತಿ:  ಪ್ರಾರ್ಥನಾ ಮಂದಿರದ ಎದುರು ಭಿಕ್ಷೆ ಬೇಡುವುದನ್ನೇ ವೃತ್ತಿ ಮಾಡಿಕೊಂಡಿದ್ದ ಜಬೀನಾ ಹಾಗೂ ಸೈಯದ್‌ ತಿಂಗಳಿಗೊಮ್ಮೆ ಊರು ಬದಲಾಯಿಸುತ್ತಿದ್ದರು. ಭಿಕ್ಷೆಯೊಂದಿಗೆ ಸೈಯದ್‌ ನೂರ್‌್ ಪೇಟಿಂಗ್‌ ಕೆಲಸವನ್ನೂ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.

ಮಗು ಅಪಹರಿಸಿದ್ದ ನಂತರ ಶಿವಮೊಗ್ಗಕ್ಕೆ ಹೋಗಿದ್ದ ದಂಪತಿ, ಸಾಗರ ತಾಲ್ಲೂಕಿನ ಕಾಗೇಹಳ್ಳಿ ಗ್ರಾಮದ ದಂಪತಿಗೆ ಮಗುವನ್ನು ದತ್ತು ನೀಡಿದ್ದರು.
ಅವರಿಂದ ಹಣ ಪಡೆದು ಕೆಲ ದಿನ ಅಲ್ಲಿಯೇ ಪ್ರಾರ್ಥನಾ ಮಂದಿರದಲ್ಲಿ ಉಳಿದುಕೊಂಡಿದ್ದರು. ನಂತರ ಮತ್ತೆ ಬೆಂಗಳೂರಿಗೆ ಬಂದು ಇಲ್ಲಿಂದ ಕೋಲಾರಕ್ಕೆ ಹೋಗಿದ್ದರು ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.