ADVERTISEMENT

ನಾಮಕರಣ ವಿಳಂಬಕ್ಕೆ ಕಾರಣವೇನು?: ವಾಟಾಳ್‌

ಇಂದಿರಾ ನಗರ ನೂರಡಿ ರಸ್ತೆಗೆ ಡಾ.ಎಸ್‌.ಕೆ.ಕರೀಂ ಖಾನ್‌ ಹೆಸರು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2014, 19:30 IST
Last Updated 20 ಆಗಸ್ಟ್ 2014, 19:30 IST

ಬೆಂಗಳೂರು: ‘ಇಂದಿರಾ ನಗರದ ನೂರಡಿ ರಸ್ತೆಗೆ ಸ್ವಾತಂತ್ರ್ಯ ಹಾಗೂ ಕರ್ನಾಟಕ ಏಕೀಕರಣ ಹೋರಾಟಗಾರ ಎಸ್‌.ಕೆ.ಕರೀಂಖಾನ್ ಅವರ ಹೆಸರನ್ನು  ಅಂತಿಮಗೊಳಿಸಿದ್ದು, ಇನ್ನೂ ನಾಮಕರಣ ಮಾಡದಿರಲು ಕಾರಣವೇನು’ ಎಂದು ಕನ್ನಡ ಒಕ್ಕೂಟ ಸಂಘದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಬಿಬಿಎಂಪಿಯನ್ನು ಪ್ರಶ್ನಿಸಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘2006 ನೇ ಇಸವಿಯಲ್ಲಿ ನಡೆದ ಬಿಬಿಎಂಪಿ ಸಭೆಯಲ್ಲಿ ಕರೀಂ ಖಾನ್‌ರ ಹೆಸರನ್ನು ಇಂದಿರಾ ನಗರ ನೂರಡಿ ರಸ್ತೆಗೆ ನಾಮಕರಣ ಮಾಡಲು ಸರ್ವನುಮತದಿಂದ ನಿರ್ಣಯ ಕೈಗೊಂಡಿದ್ದು, 8 ವರ್ಷಗಳು ಕಳೆದರೂ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡದಿರುವುದು ನೋವಿನ ಸಂಗತಿಯಾಗಿದೆ’ ಎಂದರು.

ಬಿಬಿಎಂಪಿಯು ಈ ಕುರಿತು ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ, 25ರಂದು ಬಿಬಿಎಂಪಿ ಕಚೇರಿಯ ಮುಂದೆ ತಮಟೆ ಚಳವಳಿ ನಡೆಸಲಿದೆ. ಮುಂದಿನ 15 ದಿನಗಳಲ್ಲಿ ನಾಮಕರಣ ಮಾಡದಿದ್ದಲ್ಲಿ ಕನ್ನಡ ಒಕ್ಕೂಟವೇ ನಾಮಕರಣ ಮಾಡಿ ಕರೀಂ ಖಾನ್‌ ರವರ ಹಬ್ಬವನ್ನು ಆಚರಿಸಲಿದೆ ಎಂದು ಹೇಳಿದರು.

ಕರೀಂ ಖಾನ್‌ ಅವರು ಭಾರತ ಸ್ವಾತಂತ್ರ್ಯ, ಕರ್ನಾಟಕ ಏಕೀಕರಣ, ಜಾನಪದ ಹಾಗೂ ಸಾಮಾಜಿಕ ಸೇವೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಪಾರವಾದ ಸಾಧನೆ ಮಾಡಿದ್ದರು. ಅವರ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ರೂ 5 ಲಕ್ಷ ಒಳಗೊಂಡ ಕರೀಂ ಖಾನ್‌ ಪ್ರಶಸ್ತಿಯನ್ನು ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ಮನವಿ ಮಾಡುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ವಾಣಿಜ್ಯ ಮಂಡಳಿ ಕಿರುತೆರೆಯಲ್ಲಿ ಕಾರ್ಯಕ್ರಮ ನಡೆಸಿಕೊಡುವ ಕೆಲ ನಟರ ಚಿತ್ರಗಳ ನಿರ್ಬಂಧಕ್ಕೆ ಮುಂದಾಗಿರುವ ವಿಚಾರವಾಗಿ ಮಾತನಾಡಿದ ಅವರು ‘ಚಿತ್ರ ನಟರಿಗೂ ತಮ್ಮದೇ ಆದ ವೈಯಕ್ತಿಕ ಜೀವನವಿದ್ದು, ಅದನ್ನು ಪ್ರಶ್ನಿಸುವ ಅಧಿಕಾರ ವಾಣಿಜ್ಯ ಮಂಡಳಿಗೆ ಇಲ್ಲ, ಈ ಕುರಿತು ಮಂಡಳಿಯ ಜೊತೆ ಚರ್ಚೆ ನಡೆಸುತ್ತೇನೆ. ನಂತರವೂ ನಟರ ಚಿತ್ರಗಳ ವಿರುದ್ಧ ಕ್ರಮ ಕೈಗೊಂಡರೆ ಕನ್ನಡ ಒಕ್ಕೂಟ ಸಂಘ ಇದರ ವಿರುದ್ಧ ಹೋರಾಡಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.