ADVERTISEMENT

ನಾಳೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಬಿಬಿಎಂಪಿ: ಆಗಸ್ಟ್ 11ಕ್ಕೆ ಪಕ್ಷದ ಚುನಾವಣಾ ಪ್ರಣಾಳಿಕೆ ಪ್ರಕಟ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2015, 19:46 IST
Last Updated 2 ಆಗಸ್ಟ್ 2015, 19:46 IST

ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿಯು ಮಂಗಳವಾರ (ಆಗಸ್ಟ್‌ 4) ಪ್ರಕಟಿಸಲಿದೆ.

ಭಾನುವಾರ ಪಕ್ಷದ ಪದಾಧಿಕಾರಿಗಳ  ಸಭೆ ಬಳಿಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ  ಪ್ರಹ್ಲಾದ ಜೋಶಿ ಈ ವಿಷಯ ತಿಳಿಸಿದರು.
‘ಯಾರಿಗೆ ಟಿಕೆಟ್‌ ನೀಡಬೇಕು ಎಂಬುದನ್ನು ಪಕ್ಷದ ಚುನಾವಣಾ ಸಮಿತಿ ನಿರ್ಧರಿಸಲಿದೆ. ಆಗಸ್ಟ್ 5ರಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ’ ಎಂದರು.

ಏಕಾಂಗಿ ಸ್ಪರ್ಧೆ: ‘ಪಕ್ಷವು ಯಾವ ಪಕ್ಷದೊಂದಿಗೂ ಹೊಂದಾಣಿಕೆ ನಡೆಸುವುದಿಲ್ಲ. ಎಲ್ಲ 198 ವಾರ್ಡ್‌ಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ. ಜೆಡಿಎಸ್‌ ಜೊತೆಗಿನ ಹೊಂದಾಣಿಕೆ ವಿಧಾನ ಪರಿಷತ್ತಿಗೆ ಮಾತ್ರ ಸೀಮಿತ’ ಎಂದರು.

‘ಚುನಾವಣೆಗಾಗಿ ನಾವು ಸಮರೋಪಾದಿಯಲ್ಲಿ ಸಜ್ಜಾಗಿದ್ದೇವೆ. ಸಾಮಾಜಿಕ ಮಾಧ್ಯಮಗಳ  ಮೂಲಕವೂ ಪ್ರಚಾರ ನಡೆಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಈ ಚುನಾವಣೆಯಲ್ಲಿ ನಮಗೆ ಕಳೆದ ಬಾರಿಗಿಂತಲೂ ಹೆಚ್ಚು ಸ್ಥಾನ ದೊರಕಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆದರಿಕೆ ತಂತ್ರ:  ‘ನಗರದ ಅನೇಕ ಕಡೆ ಕಾಂಗ್ರೆಸ್‌ನ ಸಚಿವರು ಮತ್ತು ಶಾಸಕರು ಪೊಲೀಸ್‌ ಅಧಿಕಾರಿಗಳನ್ನು ಬಳಸಿಕೊಂಡು  ಜನರನ್ನು ಬೆದರಿಸುವ ತಂತ್ರವನ್ನು ಈಗಾಗಲೇ ಆರಂಭಿಸಿದ್ದಾರೆ. ಹೀಗಾಗಿ, ಚುನಾವಣಾ ಆಯೋಗವು ಸೂಕ್ಷ್ಮ ಪ್ರದೇಶಗಳಲ್ಲಿರುವ ಇನ್‌ಸ್ಪೆಕ್ಟರ್‌ ಮತ್ತು ಅಧಿಕಾರಿಗಳನ್ನು ತಾತ್ಕಾಲಿಕವಾಗಿ ಬದಲಾಯಿಸಬೇಕು’ ಎಂದು ಒತ್ತಾಯಿಸಿದರು.

‘ಕೆ.ಆರ್‌.ಪುರ, ಬ್ಯಾಟರಾಯನ ಪುರಗಳಲ್ಲಿ ಪೊಲೀಸರನ್ನು ಬಳಸಿಕೊಂಡು ಜನರನ್ನು ಹೆದರಿಸುವ ಯತ್ನಗಳು ನಡೆದಿವೆ. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ’ ಎಂದು ಹೇಳಿದರು.

11ಕ್ಕೆ ಪ್ರಣಾಳಿಕೆ: ಚುನಾವಣಾ ಉಸ್ತುವಾರಿ ಹೊತ್ತಿರುವ  ಆರ್‌.ಅಶೋಕ ಮಾತನಾಡಿ, ‘ ಆಗಸ್ಟ್‌ 11ಕ್ಕೆ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು. ಸುರೇಶ್‌ ಕುಮಾರ್‌ ನೇತೃತ್ವದಲ್ಲಿ ಪ್ರಣಾಳಿಕೆ ಸಮಿತಿ ರಚಿಸಲಾಗಿದೆ’ ಎಂದರು.

ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಅವರು ‘ಚುನಾವಣೆಯನ್ನು ಮುಂದೂಡಲು ಕಾಂಗ್ರೆಸ್‌ ಸರ್ಕಾರ ಹರ ಸಾಹಸ ನಡೆಸಿ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಕೊನೆಗೆ ರಾಜ್ಯಪಾಲರಿಂದಲೂ ಛೀಮಾರಿ ಹಾಕಿಸಿಕೊಂಡಿದೆ. ವಾಮಮಾರ್ಗದ ಮೂಲಕ ಪ್ರಜಾತಂತ್ರ ವ್ಯವಸ್ಥೆ ಹದಗೆಡಿಸಲು ಸರ್ಕಾರ ಪ್ರಯತ್ನಿಸಿತ್ತು’ ಎಂದು ಆರೋಪಿಸಿದರು.

‘ಎರಡು ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಒಮ್ಮೆಯೂ ಪಾದಯಾತ್ರೆ ನಡೆಸಿರಲಿಲ್ಲ. ಚುನಾವಣೆ ಬರುತ್ತಿದ್ದಂತೆಯೇ ಐದು ಕಡೆಗಳಲ್ಲಿ ಪಾದಯಾತ್ರೆ ನಡೆಸಿ, ಮತದಾರರ ಮೂಗಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಬೆಂಗಳೂರಿನ ಅಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಚುನಾವಣೆ ಬಂದಿದೆ ಎಂದು ಸಿದ್ದರಾಮಯ್ಯ ಎದ್ದಿದ್ದಾರೆ. ನಂತರ ಅವರು ಮಲಗುತ್ತಾರೆ. ಮತ್ತೆ ಯಾವಾಗ ಏಳುತ್ತಾರೋ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

‘ಚುನಾವಣೆಗಾಗಿ ನಾವು ರಣತಂತ್ರ ರೂಪಿಸಿದ್ದೇವೆ. ಈ ಬಾರಿಯೂ ಗೆಲ್ಲುವ ಸುವರ್ಣಾವಕಾಶ ನಮಗಿದೆ.  ಪಕ್ಷದ ಆಂತರಿಕ ವರದಿಗಳು ಇದನ್ನು ಪುಷ್ಟೀಕರಿಸಿವೆ. ಈ ಬಾರಿಯೂ ಗೆಲುವು ನಮ್ಮದೇ’ ಎಂದು ಭವಿಷ್ಯ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT