ADVERTISEMENT

ನಿಫಾ ಹರಡದಂತೆ ನಗರದಲ್ಲಿ ಕಟ್ಟೆಚ್ಚರ

ಕೇರಳಕ್ಕೆ ಹೋಗುವವರ ಸಂಖ್ಯೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 24 ಮೇ 2018, 19:40 IST
Last Updated 24 ಮೇ 2018, 19:40 IST

ಬೆಂಗಳೂರು: ನಗರದಲ್ಲಿ ನಿಫಾ ವೈರಸ್‌ ಹರಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ಬಂದು ಹೋಗುವ ಬಸ್‌ಗಳ ಮೇಲೆ ನಿಗಾ ಇರಿಸಲಾಗಿದೆ. ಭಿತ್ತಿಪತ್ರ ಅಂಟಿಸಿ ಜಾಗೃತಿ ಹೆಚ್ಚಿಸುವ ಕ್ರಮ ಕೈಗೊಳ್ಳಲಾಗಿದೆ.

ಈ ಕುರಿತು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ಮಳೆಗಾಲ ಆರಂಭವಾಗುವ ಸಮಯ
ದಲ್ಲಿ ಚಿಕೂನ್‌ ಗುನ್ಯಾ, ಡೆಂಗಿ, ಮಲೇರಿಯಾದಂತಹ ರೋಗಗಳು ಹೆಚ್ಚುತ್ತವೆ. ಈಗ ನಿಫಾ ಕೂಡ ಜನರಲ್ಲಿ ಆತಂಕ ಹೆಚ್ಚಿಸಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಇದಕ್ಕೆ ಮೊದಲ ಪರಿಹಾರ. ನಗರದಲ್ಲಿ ಜಾಗೃತಿ ಹೆಚ್ಚಿಸುವ ಕೆಲಸ ಮಾಡಲಿದ್ದೇವೆ’ ಎಂದರು.

‘ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಔಷಧಿಗಳ ಮಾಹಿತಿಯನ್ನು ನಂಬಬೇಡಿ. ಅದಕ್ಕೆಲ್ಲಾ ಯಾವುದೇ ದಾಖಲೆ ಇಲ್ಲ. ನಿಫಾ ಬಂದ ಕೂಡಲೇ ಸಾವನ್ನಪ್ಪುತ್ತಾರೆ ಎಂಬುದು ಸುಳ್ಳು. ಅದಕ್ಕೆ ಯಾವುದೇ ಚಿಕಿತ್ಸೆ ಇಲ್ಲ ಎನ್ನುವುದು ನಿಜ. ಆದರೆ, ಆರಂಭದಲ್ಲಿಯೇ ಗೊತ್ತಾದರೆ ಖಂಡಿತಾ ರೋಗಿಯನ್ನು ಬದುಕಿಸಬಹುದು. ಆದ್ದರಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ನಾವು ಪಾಲಿಸಲೇಬೇಕು’ ಎಂದರು.

ADVERTISEMENT

‘ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಕರೆದು ಸಭೆ ಮಾಡಲಾಗಿದೆ. ನಗರದಲ್ಲಿ ನಿಫಾ ಲಕ್ಷಣಗಳು ಇರುವ ರೋಗಿಗಳು ಕಂಡುಬಂದರೆ ತಕ್ಷಣ ಮಾಹಿತಿ ನೀಡಬೇಕು ಎಂದು ಆದೇಶ ನೀಡಲಾಗಿದೆ. ಕೇರಳಕ್ಕೆ ಹೋಗಿ ಬರುವ ಬಸ್‌ ಚಾಲಕರು ರಜೆ ಕೇಳಿದರೆ ಅವರ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಳ್ಳಬೇಕು. 15 ದಿನಗಳ ಹಿಂದೆ ಅಲ್ಲಿಂದ ಬಂದವರಿಗೆ ಕೂಡ ಜ್ವರ, ಶೀತ, ಕೆಮ್ಮು ಇದ್ದರೆ ಅಂಥವರು ಪರೀಕ್ಷೆ ಮಾಡಿಸಿಕೊಳ್ಳಬೇಕು.

‘ಆಯಾ ವಿಭಾಗಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರವರ ಜವಾಬ್ದಾರಿ ಕುರಿತು ಮಾಹಿತಿ ನೀಡಿದ್ದೇವೆ. ಶಾಲೆಗಳಲ್ಲಿ ಮಕ್ಕಳ ಆರೋಗ್ಯದ ಕುರಿತು ವಿಶೇಷವಾಗಿ ಕಾಳಜಿ ವಹಿಸುವಂತೆ ಹೇಳಿದ್ದೇವೆ. ಮಕ್ಕಳು ಚೆರಿ ಹಣ್ಣುಗಳನ್ನು ಹೆಚ್ಚು ತಿನ್ನುತ್ತಾರೆ. ಶಾಲೆಯ ಸುತ್ತಮುತ್ತ ರಸ್ತೆ ಬದಿಯಲ್ಲಿ ಕೊಂಡುಕೊಂಡು ತೊಳೆಯದೇ ತಿನ್ನುತ್ತಾರೆ. ಪೋಷಕರು ಕೂಡ ಎಚ್ಚರಿಕೆಯಿಂದ ಇರಬೇಕು’ ಎಂದರು.

‘ನೀರು ಕುಡಿಯುವಾಗ ಹೆಚ್ಚು ಜಾಗೃತವಾಗಿರಬೇಕು. ಮನೆ ಹತ್ತಿರದಲ್ಲಿ ಪ್ಲಾಸ್ಟಿಕ್‌, ತೆಂಗಿನಚಿಪ್ಪುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು’ ಎಂದು ಡಾ.ಎಂ.ರಮೇಶ್‌ ಬಾಬು ತಿಳಿಸಿದರು.

ಬಿಬಿಎಂಪಿಯಿಂದ ಮುಂಜಾಗೃತಾ ಕ್ರಮ

ಪಾಲಿಕೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ರೋಗಿಗಳಲ್ಲಿ ನಿಫಾ ವೈರಸ್ ಕಂಡುಬಂದರೆ ತಕ್ಷಣವೇ ಪಾಲಿಕೆಯ ಆರೋಗ್ಯ ಇಲಾಖೆಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಸೋಂಕು ಕಂಡುಬಂದಲ್ಲಿ ಆಸ್ಪತ್ರೆಗಳಲ್ಲಿ ತುರ್ತುಚಿಕಿತ್ಸಾ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜಾಗೃತಿಗಾಗಿ ಕರಪತ್ರ ಹೊರಡಿಸಲಾಗಿದೆ. ಕಿರುಚಿತ್ರ ನಿರ್ಮಿಸಿ ಪ್ರದರ್ಶನ ಮಾಡಲಿದ್ದೇವೆ. ನೆರವಿಗಾಗಿ ದೂರವಾಣಿ ಸಂಖ್ಯೆ 104ಗೆ ಕರೆಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೇರಳಕ್ಕೆ ಹೋಗುವವರ ಸಂಖ್ಯೆ ಇಳಿಕೆ

ಬೆಂಗಳೂರು: ಕೇರಳದಲ್ಲಿ ನಿಫಾ ವೈರಸ್‌ ಹರಡಿರುವ ಕಾರಣ ಕರ್ನಾಟಕದಿಂದ ಅಲ್ಲಿಗೆ ಹೋಗುವವರ ಸಂಖ್ಯೆ ವ್ಯಾಪಕವಾಗಿ ಕಡಿಮೆಯಾಗಿದೆ.

ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಕೂಡ ಕೇರಳದ ಕೋಯಿಕ್ಕೋಡ್‌, ಮಲಪ್ಪುರ, ವಯನಾಡ್‌, ಕಣ್ಣೂರು ಪ್ರದೇಶಗಳಿಗೆ ಹೋಗದಿರುವುದು ಒಳ್ಳೆಯದು ಎಂದು ಸಲಹೆ ನೀಡಿದೆ.

ಕೇರಳದ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೀವ್‌ ಸದಾನಂದನ್‌ ಕೂಡ ಪ್ರಯಾಣ ಮಾಡದಂತೆ ಮನವಿ ಮಾಡಿದ್ದಾರೆ. ‘ಅನಿವಾರ್ಯವಾಗಿ ಹೋಗಬೇಕಾದರೆ ಮುಂಜಾಗೃತಾ ಕ್ರಮಗಳನ್ನು ಅನುಸರಿಸಬೇಕು’ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಬಿ.ರಾಮು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.