ADVERTISEMENT

‘ನಿಮ್ಮ ಮಗನನ್ನು ಯಾವ ಶಾಲೆಗೆ ಸೇರಿಸುತ್ತೀರಿ?’

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 19:50 IST
Last Updated 21 ಮಾರ್ಚ್ 2018, 19:50 IST
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ತ್ರಿಷಿಕಾ ಕುಮಾರಿ ಅವರಿಗೆ ವಿದ್ಯಾರ್ಥಿಗಳು ಹಸ್ತಲಾಘವ ಮಾಡಿದರು          –ಪ್ರಜಾವಾಣಿ ಚಿತ್ರ
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ತ್ರಿಷಿಕಾ ಕುಮಾರಿ ಅವರಿಗೆ ವಿದ್ಯಾರ್ಥಿಗಳು ಹಸ್ತಲಾಘವ ಮಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಿಮ್ಮ ಮಗ ಆದ್ಯವೀರ ನರಸಿಂಹರಾಜ ಒಡೆಯರ್‌ನನ್ನು ಸರ್ಕಾರಿ ಶಾಲೆಗೆ ಸೇರಿಸುತ್ತೀರಾ ಅಥವಾ ಖಾಸಗಿ ಶಾಲೆಗೆ ಸೇರಿಸುತ್ತೀರಾ? ಮಹಾರಾಜ, ನೀವು ಏಕೆ ನಿಮ್ಮ ಸೈನಿಕರೊಂದಿಗೆ ಬಂದಿಲ್ಲ?’

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ತ್ರಿಷಿಕಾ ಕುಮಾರಿ ಅವರಿಗೆ ಬ್ಯಾಟರಾಯನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿವು.

ಕಲಿಸು ಪ್ರತಿಷ್ಠಾನವು ಈ ಶಾಲೆಯಲ್ಲಿ ನಿರ್ಮಿಸಿರುವ ಜ್ಞಾನಾಲಯವನ್ನು ಬುಧವಾರ ಉದ್ಘಾಟಿಸಿದ ಬಳಿಕ ಮಕ್ಕಳೊಂದಿಗೆ ದಂಪತಿ ಸಂವಾದ ನಡೆಸಿದರು.

ADVERTISEMENT

‘ಆತನಿಗೆ (ಆದ್ಯವೀರ) ಇನ್ನೂ 3 ತಿಂಗಳಷ್ಟೆ. ಆತ ದೊಡ್ಡವನಾದ ಬಳಿಕ ಈ ಬಗ್ಗೆ ಯೋಚಿಸಿ, ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಯದುವೀರ ತಿಳಿಸಿದರು.

‘ಈ ಕಾಲದಲ್ಲಿ ನಮಗೆ ಸೈನಿಕರು ಬೇಕಾಗಿಲ್ಲ. ನೀವೇ ನಮ್ಮ ಸೈನಿಕರು. ಅದು ರಾಜರ ಕಾಲದಲ್ಲಿ ನಡೆಯುತ್ತಿದ್ದ ಸಂಭ್ರಮ. ಈಗ ಅದು ಇಲ್ಲ’ ಎಂದರು.

5ನೇ ತರಗತಿ ವಿದ್ಯಾರ್ಥಿನಿ ಬಸಮ್ಮ, ‘ನೀವು ಮಹಾರಾಜರ ಬಟ್ಟೆ ಹಾಕಿಕೊಳ್ಳುತ್ತೀರಿ. ಇದರ ಜತೆಗೆ ಬೇರೆ ಯಾವ ಬಟ್ಟೆ ಹಾಕಿಕೊಳ್ಳಲು ಇಷ್ಟಪಡುತ್ತೀರಿ’ ಎಂದು ಪ್ರಶ್ನಿಸಿದಳು.

ಇದಕ್ಕೆ ಉತ್ತರಿಸಿದ ಯದುವೀರ, ‘ಮಹಾರಾಜರ ಪೋಷಾಕಿನಲ್ಲಿ ಇರುವುದನ್ನು ನೀವು ಮಾಧ್ಯಮಗಳ ಮೂಲಕ ಗಮನಿಸಿದ್ದೀರಿ. ಆದರೆ, ನಾನು ಎಲ್ಲರಂತೆ
ಶರ್ಟ್‌, ಪ್ಯಾಂಟ್‌ ಹಾಕಿಕೊಳ್ಳುತ್ತೇನೆ.ದಸರಾ ಸಂದರ್ಭದಲ್ಲಿ ಖಾಸಗಿ ದರ್ಬಾರ್‌ವೇಳೆ ಹಾಗೂ ಅರಮನೆಯಲ್ಲಿ ಪೂಜಾ ಕಾರ್ಯಕ್ರಮಗಳು ಇದ್ದಾಗ ರಾಜರ ಪೋಷಾಕು ಧರಿಸುತ್ತೇನೆ’ ಎಂದರು.‌

‘ಆಗಿನ ಆಳ್ವಿಕೆ ಸರಿಯೇ? ಈಗಿನ ಆಳ್ವಿಕೆ ಸರಿ ಇದೆಯಾ’ ಎಂದು 7ನೇ ತರಗತಿಯ ಪ್ರಿಯಾ ಪ್ರಶ್ನಿಸಿದಳು.

‘ಹಿರಿಯರು ಹೇಳಿದ್ದನ್ನು ಪರಿಗಣಿಸುವುದಾದರೆ, ಆ ಕಾಲ ಉತ್ತಮ ಅನಿಸುತ್ತದೆ. ಆದರೆ, ನಾವು ಈ ಕಾಲಘಟ್ಟದಲ್ಲಿ ಬೆಳೆದಿರುವುದರಿಂದ ಇದು ಇಷ್ಟವಾಗುತ್ತದೆ’ ಎಂದರು.

‘ದಸರಾ ಸಂದರ್ಭದಲ್ಲಿ ನಿಮ್ಮ ಹವ್ಯಾಸಗಳೇನು’ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ.

ಇದಕ್ಕೆ ಉತ್ತರಿಸಿದ ಯದುವೀರ, ‘ದಸರಾ ವೇಳೆ ಖಾಸಗಿ ದರ್ಬಾರ್‌ ಹಾಗೂ ಪೂಜೆಗಳು ಇರುತ್ತವೆ. ಆಗ ಹವ್ಯಾಸಗಳ ಕಡೆಗೆ ಗಮನ ಹರಿಸಲು ಸಮಯ ಸಿಗುವುದಿಲ್ಲ. ಪುಸ್ತಕ ಓದುವುದು, ಟೆನ್ನಿಸ್‌ ಆಡುವುದು, ಗಿಟಾರ್‌ ನುಡಿಸುವುದು ನನ್ನ ಹವ್ಯಾಸಗಳು’ ಎಂದು ಹೇಳಿದರು.

‘ಕಾಲೇಜು ಜೀವನ ಹೇಗಿತ್ತು’ ಎಂಬುದು ಮತ್ತೊಬ್ಬ ವಿದ್ಯಾರ್ಥಿಯ ಪ್ರಶ್ನೆ.

‘ಬೇರೆ ವಿದ್ಯಾರ್ಥಿಗಳ ಜೀವನ ಹೇಗಿರುತ್ತದೆಯೋ ಹಾಗೆಯೇ ನನ್ನದೂ ಇತ್ತು. ಅದನ್ನು ನಾನು ತುಂಬಾ ಎಂಜಾಯ್‌ ಮಾಡಿದ್ದೇನೆ’ ಎಂದರು.

‘ನಿಮಗೆ ಇಷ್ಟವಾದ ನಗರ ಯಾವುದು’ ಎಂದು ವಿದ್ಯಾರ್ಥಿನಿ ಪ್ರಶ್ನಿಸಿದಳು.

‘ಮೈಸೂರು ಅತಿ ಇಷ್ಟವಾದ ನಗರ. ಶಾಲಾ ಕಲಿಕೆ ಬೆಂಗಳೂರಿನಲ್ಲಿ ಆಗಿದ್ದರಿಂದ ಇದು ಸಹ ಇಷ್ಟ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.