ADVERTISEMENT

ನಿಯಮ ಉಲ್ಲಂಘಿಸಿ ಸವಾರರ ಪ್ರವೇಶ

ಏಕಮುಖ ಸಂಚಾರವಿರುವ ರೆಸಿಡೆನ್ಸಿ ರಸ್ತೆ ನೋಟ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:33 IST
Last Updated 30 ಜುಲೈ 2015, 19:33 IST

ಬೆಂಗಳೂರು: ಏಕಮುಖ ಸಂಚಾರ ವಿರುವ ರೆಸಿಡೆನ್ಸಿ ರಸ್ತೆ ಮತ್ತು ಲ್ಯಾವೆಲ್ಲೆ ರಸ್ತೆಗೆ ರಿಚ್‌ಮಂಡ್ ವೃತ್ತದ ಕಡೆಯಿಂದ ಪ್ರವೇಶಿಸುವ ವಾಹನ ಸವಾರರು, ನಿಯ ಮಗಳನ್ನು ಉಲ್ಲಂಘಿಸುವ ಮೂಲಕ ಸಂಚಾರದಟ್ಟಣೆಗೆ ಕಾರಣವಾಗುತ್ತಿದ್ದಾರೆ.

ಸದಾ ವಾಹನನಿಬಿಡವಾಗಿರುವ ಈ ಜಾಗದಲ್ಲಿ ರೆಸಿಡೆನ್ಸಿ ರಸ್ತೆ ಕಡೆಗೆ ವಾಹನಗಳು ಚಲಿಸದಂತೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಆದರೂ, ವಾಹನ ಸವಾರರು ಸಂಚಾರ ಪೊಲೀಸರನ್ನು ಲೆಕ್ಕಿಸದೆ ಇದೇ ಮಾರ್ಗದಲ್ಲಿ ವಿರುದ್ಧವಾಗಿ ಚಲಿಸುವುದು ಸಾಮಾನ್ಯವಾಗಿದೆ.

ರಿಚ್‌ಮಂಡ್ ರಸ್ತೆಯಲ್ಲಿ ನಾಲ್ಕೈದು ಶಾಲೆಗಳ ಜತೆಗೆ, ಸಿಗ್ನಲ್‌ಗೆ ಹೊಂದಿಕೊಂಡಂತೆ ಬಿಎಂಟಿಸಿ ಬಸ್‌ ನಿಲ್ದಾಣವೂ ಇದೆ. ಶಾಲಾ ಮಕ್ಕಳು ಸೇರಿದಂತೆ, ಪಾದಚಾರಿಗಳು ಓಡಾಡುತ್ತಿರುತ್ತಾರೆ. ಆದರೂ ಸವಾರರು ನಿಷೇಧವನ್ನು ಲೆಕ್ಕಿಸದೆ, ರಸ್ತೆಯನ್ನು ಪ್ರವೇಶಿಸುವ ಮೂಲಕ ಅಪಾಯವನ್ನು ತಂದೊಡ್ಡುತ್ತಿದ್ದಾರೆ.

ನಿಯಮ ಪಾಲಿಸಬೇಕು: ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್‌ ಡಾ.ಎಂ.ಎ. ಸಲೀಂ ಅವರು, ‘ಏಕಮುಖ ಸಂಚಾರ ವಿರುವ ರಸ್ತೆಗಳಲ್ಲಿ ವಿರುದ್ಧವಾಗಿ ಚಲಿಸುವ ಮೂಲಕ, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ನಾವು ನಿತ್ಯವೂ ಪ್ರಕರಣ ದಾಖಲಿಸುತ್ತಿದ್ದೇವೆ. ಹತ್ತಿರದ ರಸ್ತೆ ಎಂದು ಭಾವಿಸಿ, ಏಕ ಮುಖ ಸಂಚಾರವಿರುವ ರಸ್ತೆಗಳಲ್ಲಿ ವಿರುದ್ಧವಾಗಿ ಚಲಿಸಿದರೆ, ಅಪಘಾತದ ಸಂಭವವೇ ಹೆಚ್ಚು.

ಜನರ ಅನು ಕೂಲಕ್ಕಾಗಿ ಮಾಡಿರುವ ನಿಯಮಗಳನ್ನು ಪಾಲಿಸುವತ್ತ ವಾಹನ ಸವಾರರು ಗಮನ ಹರಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.