ADVERTISEMENT

ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಬಿಟಿಸಿ ಸಿಇಒ

ಕ್ವೀನ್ ಲತೀಫಾಗೆ ಉದ್ದೀಪನಾ ನೀಡಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 23 ಮೇ 2017, 19:58 IST
Last Updated 23 ಮೇ 2017, 19:58 IST
ಬೆಂಗಳೂರು: ರೇಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ‘ಕ್ವೀನ್ ಲತೀಫಾ’ ಕುದುರೆಗೆ ಉದ್ದೀಪನಾ ಮದ್ದು ನೀಡಲಾಗಿತ್ತು ಎಂಬ ಆರೋಪ ಸಂಬಂಧ ಸಿಐಡಿ ತನಿಖೆ ಚುರುಕುಗೊಂಡ ಬೆನ್ನಲ್ಲೇ ಬೆಂಗಳೂರು ಟರ್ಫ್‌ ಕ್ಲಬ್‌ (ಬಿಟಿಸಿ) ಸಿಇಒ ಸೇರಿ ಐದು ಮಂದಿ ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. 
 
‘ಸಿಇಒ ಎಸ್‌.ನಿರ್ಮಲ್ ಪ್ರಸಾದ್, ಮುಖ್ಯ ಸ್ಟೈಪೆಂಡರಿ ಅಧಿಕಾರಿ ಪ್ರದ್ಯುಮ್ನ ಸಿಂಗ್, ಅಲ್ಲಿನ ನೌಕರರಾದ ವಿವೇಕ್, ಅರ್ಜುನ್ ಹಾಗೂ ನೀಲ್ ಎಂಬುವರು ಅರ್ಜಿ ಸಲ್ಲಿಸಿದ್ದಾರೆ.
 
ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ನ್ಯಾಯಾಲಯಕ್ಕೆ ನಾವೂ ಮನವಿ ಮಾಡಿದ್ದೇವೆ’ ಎಂದು ಸಿಐಡಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
 
‘ಪ್ರಕರಣದಲ್ಲಿ ಸಿಇಒ ಮೊದಲ ಆರೋಪಿಯಾಗಿದ್ದಾರೆ. ಮೇ 19ರಂದು ಬಿಟಿಸಿಗೆ ಭೇಟಿ ನೀಡಿದಾಗ ನಿರ್ಮಲ್ ಪ್ರಸಾದ್ ಹಾಗೂ ಪ್ರದ್ಯುಮ್ನ ಸಿಂಗ್ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದೆವು. ಆದರೆ, ಇತರೆ ಮೂವರು ಸಿಕ್ಕಿರಲಿಲ್ಲ. ಎಫ್‌ಐಆರ್‌ನಲ್ಲಿರುವ ಅಷ್ಟೂ ಮಂದಿಯನ್ನು ಶೀಘ್ರದಲ್ಲೇ ವಿಚಾರಣೆಗೆ ಕರೆಸುತ್ತೇವೆ’ ಎಂದರು.  
 
ಮತ್ತೆ ಭೇಟಿ: ಸೋಮವಾರ ಮತ್ತೆ ಬಿಟಿಸಿಗೆ ಭೇಟಿ ನೀಡಿದ್ದ ಸಿಐಡಿ ತಂಡ, ಕ್ವೀನ್ ಲತೀಫಾ ಪಾಲ್ಗೊಂಡಿದ್ದ ಎಲ್ಲ ರೇಸ್‌ಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡಿದೆ. ಅಲ್ಲದೆ, ರೇಸ್ ನಡೆದ ದಿನ (ಮಾರ್ಚ್ 5) ಕ್ಲಬ್ ಅಧಿಕಾರಿಗಳಿಗೆ ಬಂದಿರುವ ಹಾಗೂ ಇವರಿಂದ ಬೇರೆಯವರಿಗೆ ಹೋಗಿರುವ ಎಲ್ಲ ಮೇಲ್‌ಗಳನ್ನು ಸಂಗ್ರಹಿಸಿಕೊಂಡು ಬಂದಿದೆ. 
 
‘ಮೇಲ್‌ಗಳನ್ನು ಪರಿಶೀಲಿಸುತ್ತಿದ್ದೇವೆ. ಜತೆಗೆ, ಕುದುರೆ ಮೂತ್ರದ ಮಾದರಿ ಪರಿಶೀಲಿಸಿದ್ದ ದೆಹಲಿ ಹಾಗೂ ಮಾರಿಷಸ್ ಪ್ರಯೋಗಾಲಯಗಳ ವರದಿಗಳನ್ನೂ ತಾಳೆ ಮಾಡುತ್ತಿದ್ದೇವೆ. ಸಾಧ್ಯವಾದರೆ, ಆ ಪ್ರಯೋಗಾಲಯಗಳ ಅಧಿಕಾರಿಗಳನ್ನೂ ದೂರವಾಣಿ ಮೂಲಕ ಸಂಪರ್ಕಿಸಿ ಹೇಳಿಕೆ ಪಡೆಯುತ್ತೇವೆ’ ಎಂದು ಅಧಿಕಾರಿಗಳು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.