ADVERTISEMENT

ನಿವಾಸಿಗಳಿಗೆ ಕಾಯಿಲೆ ತಂದ ಕೆರೆ ಮಾಲಿನ್ಯ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 20:57 IST
Last Updated 24 ಮಾರ್ಚ್ 2017, 20:57 IST

ಬೆಂಗಳೂರು: ವರ್ತೂರು ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿರುವ ಅಂಶ ಶಾಲಾ ವಿದ್ಯಾರ್ಥಿಗಳು ಹಾಗೂ ವೈದ್ಯರು ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.

ಈ ಕೆರೆಯ ಆಸುಪಾಸಿನಲ್ಲಿರುವ ಬೆಳಗೆರೆ, ರಾಮಗೊಂಡನಹಳ್ಳಿ, ಸಿದ್ದಾಪುರ, ಗುಂಜೂರು, ಗಂಜೂರು ಪಾಳ್ಯ, ಸೊರೆಹುಣಸೆ, ಪಣತ್ತೂರು ಮತ್ತು ಮುನ್ನೆಕೊಳ್ಳಾಲ ಗ್ರಾಮಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ.

‘ಉದರ ಸಂಬಂಧಿ ಹಾಗೂ ಅತಿಸಾರದಿಂದ ಬಳಲುತ್ತಿರುವವರ ಸಂಖ್ಯೆ ಒಂದು ವರ್ಷದಿಂದ ಹೆಚ್ಚುತ್ತಿದೆ. ಕಲುಷಿತ ಆಹಾರ ಹಾಗೂ ನೀರಿನಿಂದ ಈ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ’ ಎಂದು ವೈದ್ಯ, ರಾಮಗೊಂಡನಹಳ್ಳಿಯ ನಿವಾಸಿ ಡಾ. ರಮೇಶ್‌ ಕೃಷ್ಣಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
ಮಕ್ಕಳ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಕೆ.ಕೆ. ಪ್ರೌಢಶಾಲೆಯ ಪ್ರಾಂಶುಪಾಲ ಎಂ.ಎ. ಖಾನ್‌ ಹಾಗೂ 8ನೇ ತರಗತಿಯ ವಿದ್ಯಾರ್ಥಿಗಳು ಅಧ್ಯಯನ ನಡೆಸಿದ್ದರು.

ADVERTISEMENT

‘ಅನೇಕ ಗ್ರಾಮಸ್ಥರು ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಲು ಕೆರೆಯ ನೀರನ್ನೇ ಬಳಸುತ್ತಿದ್ದರು. ಗುಂಜೂರು ಪಾಳ್ಯದ 120 ಕುಟುಂಬಗಳು ಹೈನುಗಾರಿಕೆಗೆ ಇದೇ ನೀರನ್ನು ಬಳಸುತ್ತಿವೆ. ಕೆರೆಯಲ್ಲಿ ಬೆಳೆದ ಹುಲ್ಲನ್ನು ಹಸುಗಳಿಗೆ ಹಾಕುತ್ತಿದ್ದರು. ಕೆರೆಯ ನೀರಿನಲ್ಲಿ ಸೀಸ, ಸತು, ಪಾದರಸದ ಪ್ರಮಾಣ ಹೆಚ್ಚಾಗಿದೆ. ಇದರಿಂದ ವಿಷಯುಕ್ತ ಹಾಲು ಉತ್ಪತ್ತಿಯಾಗಲಿದೆ’  ಎಂದು ಎಂ.ಎ. ಖಾನ್‌ ತಿಳಿಸಿದರು.

ವೈದ್ಯ ಡಾ. ಆರ್‌. ರವಿಕುಮಾರ್‌ ಮಾತನಾಡಿ, ‘ಈ ಹಿಂದೆ ಕ್ಲಿನಿಕ್‌ಗೆ ಪ್ರತಿದಿನ 20 ರೋಗಿಗಳು ಬರುತ್ತಿದ್ದರು. ಈಗ ಸಂಖ್ಯೆ 60ಕ್ಕೆ ಏರಿದೆ. ಬಹುಪಾಲು ಮಂದಿ ಕೆಮ್ಮು, ಕಫ, ಜ್ವರ, ವಿಷಮ ಶೀತಜ್ವರ, ಉದರ ಸಮಸ್ಯೆ, ವಾಂತಿ, ಅತಿಸಾರ, ಚರ್ಮದ ಅಲರ್ಜಿ ಮತ್ತು ಅಪಸ್ಮಾರದಿಂದ ಬಳಲುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.