ADVERTISEMENT

ನೂರು ಸ್ವರ, ಒಂದೊಂದು ಅತಿ ಮಧುರ

ಶತಮಾನೋತ್ಸವ ಕವಿಗೋಷ್ಠಿಯಲ್ಲಿ ದಿಗ್ಗಜರ ಜುಗಲ್‌ಬಂದಿ

​ಪ್ರಜಾವಾಣಿ ವಾರ್ತೆ
Published 5 ಮೇ 2015, 19:44 IST
Last Updated 5 ಮೇ 2015, 19:44 IST

ಬೆಂಗಳೂರು: ಹೊರಗೆ ಬಾನಂಗಳದಲ್ಲಿ ಸಂಜೆಗೆ ರಂಗೇರಿದ ರಸಮಯ ಗಳಿಗೆ. ಒಳಗೆ ಸ್ವಾರಸ್ವತ ಲೋಕದ ಪಕ್ಷಿಗಳ ಕಲರವ. ಒಳ ಹೊರಗಿನ ಭಾವ ಶೃಂಗಾರಕ್ಕೆ ಸೇತುವೆಯಾಗುವಂತೆ ಕಣ್ಣು ಕಿವಿ ನೆಟ್ಟ ಸಹೃದಯ ಜೀವಗಳಲ್ಲಿ ನೂರೊಂದು ಕನಸುಗಳ  ಸಂಚಾರ...

ಇಂತಹದೊಂದು ಸನ್ನಿವೇಶಕ್ಕೆ ನಗರದಲ್ಲಿ ಮಂಗಳವಾರ ನಡೆದ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 9ನೇ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಿದ್ದ ‘ಶತಮಾನೋತ್ಸವ ಕವಿಗೋಷ್ಠಿ’ ಸಾಕ್ಷಿಯಾಯಿತು.

ಗೋಷ್ಠಿಗೆ ಚಾಲನೆ ನೀಡಲು ಮೊದಲಾದ ಸಾಹಿತಿ ಸಾ.ಶಿ.ಮರುಳಯ್ಯ ಅವರು ‘ನಮಗೆ ನಾಡಿನ ಬಗ್ಗೆ ಅಭಿಮಾನವಿರಬೇಕು. ಹೆತ್ತ ತಾಯಿ, ಹೊತ್ತ ನೆಲ, ಬದುಕು ಕೊಟ್ಟ ಭಾಷೆ ಇವು ಮೂರನ್ನೂ ಯಾರು ಮರೆಯಬಾರದು’ ಎಂದು ಹೇಳುತ್ತಲೇ ‘ಅದ್ಭುತ ಶಕ್ತಿಯುಳ್ಳ ಯುವ ಚೇತನ ಜಾಗೃತಗೊಳ್ಳಬೇಕು. ಇವತ್ತು ನಮ್ಮ ಯುವಶಕ್ತಿ ಮತ್ತದರ ಪ್ರತಿಭೆ ಗಂಗಾನದಿಯ ಪಾತ್ರದಲ್ಲಿ ಹರಿಯುವ ಬದಲು ಚರಂಡಿ ಪಾಲಾಗುತ್ತಿದೆ’ ಎಂದು ವಿಷಾದಿಸಿದರು.

ಇದೇ ವೇಳೆ ಮರುಳಯ್ಯ ಅವರು  ಯುವಕರಿಗಾಗಿ ರಚಿಸಿದ ನವ್ಯಕಾವ್ಯ ‘ಅಭಿಮನ್ಯು’ ವಾಚಿಸಿದರು...
ಪಥವ ತಪ್ಪಿದ ಉಲ್ಕೆ ಉರಿಯುತ್ತಾ ಕಣ್ಮರೆಯಾಗುವಂತೆ
ಲಂಗು ಲಗಾಮಿಲ್ಲದ ಕುದುರೆಯಂತೆ, ಬ್ರೇಕು ತಪ್ಪಿದ ಬಸ್ಸಿನಂತೆ
ಬೆಟ್ಟದ ಬುಡ ಅಪ್ಪಳಿಸ ಹೋದ ಹುಚ್ಚು ಹೊಳೆಯಂತೆ
ಧಾವಿಸಿದೆ, ದಟ್ಟಿಸಿದೆ, ಧುಮ್ಮಿಕ್ಕಿದೆ ಯುವಶಕ್ತಿ
ಗಾಳಿ ಬೆವರಿತು, ನೀರು ಬಾಯಾರಿತು, ಬೀಸಿಲು ಉಬ್ಬಸಗೊಂಡು ಬೀಸಣಿಕೆ ಬಯಸಿತ್ತು
ಕಡೆಗೆ ತುಂಬಿದ ಉತ್ಸಾಹಕ್ಕೆ ವಿವೇಕ ಬಲಿಯಾಯಿತು.

ನಂತರ ಸಾಹಿತಿ ದೊಡ್ಡರಂಗೇಗೌಡ ಅವರು ವಾಚಿಸಿದ ‘ಕವಿಯೇ ಕಾವ್ಯದ ಕಣ್ಗಾವಲು’ ಎಂಬ ಕವನದ...
ಎಲ್ಲಿ ಸ್ವಾರ್ಥ ಸಮುದ್ರ ಉಕ್ಕಿ ಮೊರೆಯುತ್ತೆ ಅಲ್ಲಿ ಪ್ರಶಾಂತತೆ ಚೂರಾಗುತ್ತೆ ಎಲ್ಲಿ ದುರಾಸೆ ನದಿಯಾಗುತ್ತೆ ಅಲ್ಲಿ ಸತ್ಯಧರ್ಮದ ದಂಡೆ ಕೊರೆತ ಕಾಣುತ್ತೆ ಎಲ್ಲೆಲ್ಲಿ ದ್ವೇಷ ಜ್ವಾಲಾಮುಖಿಯಾಗುತ್ತೆ ಅಲ್ಲಲ್ಲಿ ಸಂಗ್ರಾಮ ದೇಶ ವಿದೇಶ ವ್ಯಾಪಿಸುತ್ತೆ ಆ ಓ ಮನುಜ ನೀನೇನು ಮಾಡುವೆ? ... ಎಂಬ ಈ ಸಾಲುಗಳು ಶೋತೃಗಳನ್ನು ಚಿಂತನೆಗೆ ಹಚ್ಚಿದವು.

ಹಾಸನ ಸೀಮೆಯ ಅಗ್ರಹಾರದ ಕೂಸು,
ಮೀಸೆ ಮೂಡುವ ಮೊದಲೇ ತಲೆಯೆಲ್ಲ ಜಡೆಗಟ್ಟಿ, ಕಣ್ಣ ಪಾಪೆಗಳೆಲ್ಲಿ ಕೆಂಡ ಕುಣಿದಾಡಿ
ಮೇಲೆತ್ತಿ ನೋಡಿಯೋ ಸಂತ ಸಾಹಿತ್ಯ ಸತುವಂತ, ಅಂಬೆಗಾಲಿಡುತಲೇ ಅಲ್ಲಮನ ಕಂಡವನು
ಅಂಬಿಕಾತನಯನ ಇಂಬನರಿತವನು, ಮಂಟೆಸ್ವಾಮಿ ಮಹಾದೇಶ್ವರ ಶಿಶುಮಗನು, ಗಂಟುಜಗಳದ ಪ್ರಭು ಚಾರ್ವಾಕನು...
ಗರುಡ ಮೂಗಿನ ಕೆಳಗೆ ಬೀರಿದ ಮಲ್ಲಿಗೆಯ ನಗೆ, ಅಜಾತ ಶತ್ರುವಿನ ಅವತಾರ ಇನ್ನೆಲ್ಲಿ ಹಗೆ.

.. ಹೀಗೆ ತಮ್ಮ ಮಾನಸಿಕ ಗುರು  ಕಿ.ರಂ.ನಾಗರಾಜ್‌ ಅವರ ವ್ಯಕ್ತಿತ್ವವನ್ನು ತಮ್ಮ ‘ನಮ್ಮ ಪ್ರೀತಿಯ ಕಿ.ರಂ’ ಕವನದಲ್ಲಿ ಬಣ್ಣಿಸಿದರು ಕಸಾಪ ಮಾಜಿ ಅಧ್ಯಕ್ಷ ಆರ್‌.ಕೆ. ನಲ್ಲೂರು ಪ್ರಸಾದ್‌.

ನಂತರ ಎದ್ದು ನಿಂತ ಕವಯತ್ರಿ ಪ್ರತಿಭಾ ನಂದಕುಮಾರ್ ಅವರು ಬಿಪಾಶಾ ಬಸು ಗೊತ್ತಲ್ವಾ? ಎಂಬ ಪ್ರಶ್ನೆಯನ್ನು ಸಭಿಕರತ್ತ ತೇಲಿ ಬಿಟ್ಟರು. ಆಗ ಅಬಾಲವೃದ್ಧರಾದಿಯಾಗಿ ಎಲ್ಲ ಪ್ರೇಕ್ಷರರೂ ಹೋ.. ಎಂದು ನಗುತ್ತಲೇ ಪ್ರತಿಕ್ರಿಯಿಸಿದರು.
ಆಗ ಪ್ರತಿಭಾ ಅವರು ಬಿಪಾಶಾ ಬಸು ಈ ಹಿಂದೆ ತನಗೆ ಸೀರೆ ಉಡಲು ಬರುವುದಿಲ್ಲ ಎಂದು ಹೇಳಿದ್ದನ್ನು ಕೇಳಿ ಬರೆದ ಪದ್ಯವಿದು ಎಂದು ತಮ್ಮ ‘ಸೀರೆ ಉಡುವುದು’ ಕವನ ವಾಚಿಸಿದರು. ಅದರೊಳಗಿನ
...ಬೆತ್ತಲಾದವರೆಲ್ಲ ಸೂಳೆಯರಲ್ಲ, ಸೀರೆಯುಟ್ಟವರೆಲ್ಲ ಗರತಿಯರಲ್ಲ.

ಮರೆಯಲಾದಿತೇ ವಸ್ತ್ರಾಪಹರಣದ ಕತೆ
ಗೋಪಿಕಾ ಸ್ತ್ರೀಯರ ಬಟ್ಟೆ ಕದ್ದ ವ್ಯಥೆ
ಇದು ನನ್ನ ದೇಹ ನನ್ನ ದಾಹ
ಮುಚ್ಚುವುದು ಬಿಚ್ಚುವುದು ನನ್ನ ತೀಟೆ
ಸೀರೆಯೊಳಗಿನ ಸುಳಿ ಕೊಂಡೊಯ್ಯುವುದು ಕಾಣದ ಕಡೆಗೆ
ಆಗಬೇಕೆ ನೀನು ದಿಟ್ಟೆ ಎಚ್ಚರಿಕೆ ಬಿಪಾಶಾ ಇದು ಪಾಶಾ
ಎಂಬ ಸಾಲುಗಳು ಕ್ಷಣಕಾಲ ಗೋಷ್ಠಿಯನ್ನು ಸ್ತ್ರೀ ಸಂವೇದನೆಯತ್ತ ಸೆಳೆದವು.

ಕೊನೆಯದಾಗಿ ಅಧ್ಯಕ್ಷೀಯ ಭಾಷಣ ಮಾಡಿದ ಕವಿ ಜಿ.ಎಸ್‌.ಸಿದ್ಧಲಿಂಗಯ್ಯ ಅವರು ‘ನೂರು ಮರ, ನೂರು ಸ್ವರ, ಒಂದೊಂದು ಅತಿ ಮಧುರ’ ಎಂಬ ಕವಿ ಬೇಂದ್ರೆ ಅವರ ಕವನ ಸಾಲುಗಳಿಂದ ಒಟ್ಟು ಕವಿಗೋಷ್ಠಿಯನ್ನು ಬಣ್ಣಿಸಿದರು.

‘ಕವಿಗೆ ಸಾಮಾನ್ಯ ಮನುಷ್ಯನಿಗಿಂತ ಸಾವಿರ ಪಾಲು ಅಧಿಕ ಕಾಣುವ, ಅನುಭವಿಸುವ ಮತ್ತು ಅಭಿವ್ಯಕ್ತಿಸುವ ಶಕ್ತಿ ಇರುತ್ತದೆ. ಬದುಕನ್ನು ಪ್ರೀತಿಸುವ ಆತನ ಪ್ರತಿಭೆ ಬದುಕನ್ನು ಸಹ್ಯಗೊಳಿಸಲು, ನೇರಗೊಳಿಸಲು ಸಹಾಯ ಮಾಡುತ್ತದೆ. ಪ್ರತಿಭೆ ಎನ್ನುವುದು ಲೋಕದ ಎಲ್ಲ ಸಂಕಷ್ಟಗಳಿಗೂ ತಾರಕ ಶಕ್ತಿ. ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಅದು ಕತೆ, ಕಾದಂಬರಿ, ಕವನದ ಮೂಲಕ ಬದುಕಿಗೆ ಕೊಡುತ್ತ ಹೋಗುತ್ತದೆ’ ಎಂದು ಹೇಳಿ ತಮ್ಮ ‘ಬಡ ದಶರಥನ ಸಾಂತ್ವನ’ ಕವಿತೆ ಓದಿದರು.
ಗೋಷ್ಠಿಯಲ್ಲಿ ನೂತನ ಎಂ.ದೋಶೆಟ್ಟಿ, ಸುಬ್ಬು ಹೊಲೆಯಾರ್, ಎಲ್‌.ಎನ್‌.ಮುಕುಂದರಾಜು, ಮಹಮ್ಮದ್ ಭಾಷಾ ಗೂಳ್ಯಂ, ಸಂಗಮೇಶ ಉಪಾಸೆ ಅವರು ತಮ್ಮ ಕವನಗಳನ್ನು ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.