ADVERTISEMENT

ನೆತ್ತಿ ಮೇಲೆ ನೇಸರ: ನಡು ಮಧ್ಯಾಹ್ನ ನೆರಳು ಮಾಯ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 20:10 IST
Last Updated 25 ಏಪ್ರಿಲ್ 2017, 20:10 IST

ಬೆಂಗಳೂರು: ಆಗ ಗಡಿಯಾರದ ಮುಳ್ಳು ಮಧ್ಯಾಹ್ನ 12 ಗಂಟೆ 17 ನಿಮಿಷವನ್ನು ತೋರಿಸುತ್ತಿತ್ತು.  ಜವಾಹರಲಾಲ್‌ ನೆಹರೂ ತಾರಾಲಯದ ಆವರಣದಲ್ಲಿ ನೆಟ್ಟಿದ್ದ ಆ ಕಂಬದ ನೆರಳು ಇದ್ದಕ್ಕಿದ್ದಂತೆ ಕಣ್ಮರೆಯಾಯಿತು.

ಈ ಅಪರೂಪದ ವಿದ್ಯಮಾನವನ್ನು ಕಣ್ತುಂಬಿಕೊಂಡ ಚಿಣ್ಣರಿಗೆ ಸೋಜಿಗವೋ ಸೋಜಿಗ!

‘ಬೆಂಗಳೂರಿನಲ್ಲಿ ಏಪ್ರಿಲ್‌ 25ರಂದು ಮಧ್ಯಾಹ್ನ 12.17 ನಿಮಿಷಕ್ಕೆ ಸೂರ್ಯ ನಡು ನೆತ್ತಿಯ ಮೇಲೆ ಹಾದು ಹೋಗುತ್ತಾನೆ. ಆ ಹೊತ್ತು  ಕಂಬಗಳಿಗೆ ನೆರಳು ಇಲ್ಲದಂತಾಗುತ್ತದೆ. ಇದನ್ನು ಶೂನ್ಯ ನೆರಳಿನ ಮಧ್ಯಾಹ್ನ ಎಂದು ಕರೆಯಲಾಗುತ್ತದೆ’ ಎಂದು ಬೆಂಗಳೂರು ಅಸೋಸಿಯೇಷನ್‌ ಫಾರ್‌ ಸೈನ್ಸ್‌ ಎಜು
ಕೇಷನ್‌  ಹಾಗೂ ಜವಾಹರಲಾಲ್‌ ನೆಹರೂ ತಾರಾಲಯದ ಜಂಟಿ ನಿರ್ದೇಶಕ ಪ್ರಮೋದ್‌ ಜಿ.ಗಲಗಲಿ  ವಿವರಿಸಿದರು.

ADVERTISEMENT

‘ವರ್ಷದಲ್ಲಿ ಎರಡು ಬಾರಿ ಮಾತ್ರ ಈ ವಿದ್ಯಮಾನ ಕಾಣಸಿಗುತ್ತದೆ. ಭೂಮಿಯಿಂದ ನಿಂತು ನೋಡಿದಾಗ ನಿತ್ಯವೂ ಸೂರ್ಯೋದಯದ  ಸ್ಥಾನ ಪಲ್ಲಟವಾಗುತ್ತಿರುತ್ತದೆ. ಉತ್ತರಾಯಣದಲ್ಲಿ ಏಪ್ರಿಲ್‌ 25ರಂದು ಹಾಗೂ ದಕ್ಷಿಣಾಯನದಲ್ಲಿ ಆಗಸ್ಟ್‌ 19ರಂದು ಸೂರ್ಯ ಬೆಂಗಳೂರಿನ ನಡು ನೆತ್ತಿಯ ಮೇಲೆ ಹಾದುಹೋಗುತ್ತಾನೆ.  ಭೂಮಿಗೆ ಲಂಬವಾಗಿ ನೆಟ್ಟ ಕಂಬವು ಅಂದು ಮಧ್ಯಾಹ್ನ ಅರೆಕ್ಷಣ ಲವಲೇಶದಷ್ಟೂ ನೆರಳನ್ನು ಹೊಂದಿರುವುದಿಲ್ಲ’ ಎಂದರು.

‘ಈ ದಿನ ನಗರದಲ್ಲಿ ನಿರ್ದಿಷ್ಟ ಜಾಗದ ಮೇಲೆ ಬೀಳುವ ಸೂರ್ಯನ ಕಿರಣಗಳ ಪ್ರಖರತೆ ಹೆಚ್ಚು ಇರುತ್ತದೆ. ಹಾಗಾಗಿ ಅಂದು (ಮೋಡಗಳಿರದಿದ್ದರೆ)  ಸೌರವಿದ್ಯುತ್‌ ಉತ್ಪಾದನೆ ಪ್ರಮಾಣ ಹೆಚ್ಚಾಗುತ್ತದೆ’ ಎಂದರು.

‘ಅಕ್ಷಾಂಶಗಳನ್ನು  ಆಧರಿಸಿ ಸೂರ್ಯ ನಡುನೆತ್ತಿಯ ಮೇಲೆ ಬರುವ ದಿನಾಂಕ ಬದಲಾಗುತ್ತದೆ. ರಾಜ್ಯದ ವಿವಿಧ ನಗರಗಳಲ್ಲಿ ಬೇರೆಬೇರೆ ದಿನ ಶೂನ್ಯ ನೆರಳಿನ ವಿದ್ಯಮಾನ ಕಾಣಿಸಿಕೊಳ್ಳುತ್ತದೆ’ ಎಂದು ತಾರಾಲಯದ ಕಿರಿಯ ವಿಜ್ಞಾನಿ ಅಸ್ಗರ್‌ ಅಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.