ADVERTISEMENT

ನೆನಪಿನ ಅಲೆಯಲ್ಲಿ ತೇಲಿದ ಅಭಿಮಾನಿಗಳು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ಕಂಠೀರವ ಸ್ಟುಡಿಯೊದಲ್ಲಿರುವ ರಾಜ್‌ಕುಮಾರ್‌ ಅವರ ಸಮಾಧಿಗೆ ನಮಿಸಲು ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಜನ.
ಕಂಠೀರವ ಸ್ಟುಡಿಯೊದಲ್ಲಿರುವ ರಾಜ್‌ಕುಮಾರ್‌ ಅವರ ಸಮಾಧಿಗೆ ನಮಿಸಲು ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಜನ.   

ಬೆಂಗಳೂರು: ಅಭಿಮಾನಿಗಳು ಮೊಗದ ಮೇಲೆ ರಾಜ್‌ಕುಮಾರ್‌ ಅವರ ಚಿತ್ತಾರ ಬಿಡಿಸಿಕೊಂಡರು, ಅವರು ಹಾಡಿದ್ದ ಸಿನಿಮಾ ಗೀತೆಗಳನ್ನು ಹಾಡುವ ಮೂಲಕ ಗಾನಗಂಧರ್ವನಿಗೆ ನಮನ ಸಲ್ಲಿಸಿದರು, ರಕ್ತದಾನ ಮಾಡಿದರು, ಚಿತ್ತಾಕರ್ಷಕ ಕೇಕ್‌ಗಳನ್ನು ಕತ್ತರಿಸಿ ಹಂಚಿದರು...

ರಾಜ್‌ಕುಮಾರ್‌ ಅವರ 89ನೇ ಜನ್ಮದಿನದ ಪ್ರಯುಕ್ತ ನಗರದ ವಿವಿಧೆಡೆ ಅವರ ಅಭಿಮಾನಿಗಳು ನೆಚ್ಚಿನ ನಟನ ಬದುಕನ್ನು ಮೆಲುಕು ಹಾಕಿ ಸಂಭ್ರಮಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್‌ ಅಭಿಮಾನಿಗಳು ಹಬ್ಬದ ವಾತಾವರಣವನ್ನೇ ಸೃಷ್ಟಿಸಿದ್ದರು.

ರಾಜ್‌  ವಿಚಾರಧಾರೆಗಳು, ಅವರು ಹಾಡಿದ್ದ ಹಾಡುಗಳು, ಅಭಿನಯ... ಹೀಗೆ ಕಲಾಕ್ಷೇತ್ರದ ತುಂಬಾ ರಾಜ್‌ಕುಮಾರ್‌  ನೆನಪುಗಳು ಆವರಿಸಿದ್ದವು. ನಟ ಶಿವರಾಜ್‌ಕುಮಾರ್ ‘ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು...’ ಹಾಗೂ ‘ಆಕಾಶವೆ ಬೀಳಲಿ ಮೇಲೆ ನಾನೆಂದು ನಿಮ್ಮವನು...’ ಗೀತೆಗಳನ್ನು ಹಾಡಿದರು. ಹಾಡು ಮುಗಿಯುವವರೆಗೂ ಜನರ ಶಿಳ್ಳೆ, ಚಪ್ಪಾಳೆಗಳು ನಿಲ್ಲಲಿಲ್ಲ.

ಪುನೀತ್‌ ರಾಜ್‌ಕುಮಾರ್‌ ಅವರು ‘ರಾಜಕುಮಾರ’ ಚಿತ್ರದ ‘ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ...’ ಹಾಡನ್ನು ಹಾಡಲು ಪ್ರಾರಂಭಿಸಿದಾಗ ಕೆಲವರು ಅವರಲ್ಲೇ ‘ಅಣ್ಣಾವ್ರನ್ನು’ ಕಂಡು ಸಂತಸಪಟ್ಟರು.  ಇನ್ನು ಕೆಲವರು ಎದ್ದು ನಿಂತು ನಮಸ್ಕರಿಸಿದರು.

ರಾಜ್‌ ಅಪಹರಣ ಕುರಿತ ‘ಅಂದು ಸುಡುಬಿಸಿಲ ನಡು ಹಗಲು...’ ಎಂಬ  ಕವನವನ್ನು ಬರಗೂರು ರಾಮಚಂದ್ರಪ್ಪ ವಾಚಿಸಿದರು. ಗಾಯಕ ಚೆನ್ನಪ್ಪ ಹಾಡಿದ ‘ಕವಿರತ್ನ ಕಾಳಿದಾಸ’ ಚಿತ್ರದ ‘ಮಾಣಿಕ್ಯವೀಣಾ’ ಗೀತೆ ಸಭಿಕರ ಮನ ಸೆಳೆಯಿತು.

ಪುಸ್ತಕ ವಿತರಣೆ, ರಕ್ತದಾನ: ಕೆಂಪೇಗೌಡ ನಾಗರಿಕ ವೇದಿಕೆ ಕೇಶವ ಶಿಲ್ಪ ವೃತ್ತದ ಬಳಿ ರಾಜ್‌ಕುಮಾರ್ ಅವರು ಹಾಡಿರುವ ಗೀತೆಗಳ ಗಾಯನ ಏರ್ಪಡಿಸಿತ್ತು. ಕಾರ್ಯಕ್ರಮದಲ್ಲಿ  ಬಡ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು.  ದೊಮ್ಮಲೂರು ಕನ್ನಡ ಗೆಳೆಯರ ಬಳಗ ರೋಟರಿ ಕ್ಲಬ್ (ಪೂರ್ವ) ಸಹಯೋಗದೊಂದಿಗೆ ದೊಮ್ಮಲೂರಿನ ಶನಿಮಹಾತ್ಮ ಸ್ವಾಮಿ ದೇವಾಲಯದ ಆವರಣದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿತ್ತು.

ಗಾನ ನಮನ: ಚಾಮರಾಜಪೇಟೆ ಸಾಂಸ್ಕೃತಿಕ ಟ್ರಸ್ಟ್‌ ‘ಗಾನ ಗಂಧರ್ವನಿಗೊಂದು ಗಾನ ನಮನ’ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಲಕ್ಷ್ಮಿ ಮಹೇಶ್ ಮತ್ತು ಅವರ ತಂಡ ರಾಜ್‌ ಅಭಿನಯದ ಸಿನಿಮಾ ಗೀತೆಗಳನ್ನು ಪ್ರಸ್ತುತಪಡಿಸಿತು.

ಗಾನ ಮಾಧುರ್ಯ ವಾದ್ಯಗೋಷ್ಠಿ ಕಂಠೀರವ ಸ್ಟುಡಿಯೊದಲ್ಲಿ ಡಾ. ರಾಜ್ ಧ್ವನಿ ಗಾಯನ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ರಾಜಾಜಿನಗರದಲ್ಲಿ ಧ್ವಜಾರೋಹಣ ನಡೆಸಿ, ರಾಜ್‌ ಕಂಚಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಹುಟ್ಟುಹಬ್ಬ ಆಚರಿಸಿದರು.

ಕಲಾವಿದರಿಗೆ ಸನ್ಮಾನ
ರಾಜ್ ಕರ್ನಾಟಕ ರಕ್ಷಣಾ ವೇದಿಕೆ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಲಾವಿದರಾದ ಡಿಂಗ್ರಿ ನಾಗರಾಜ್, ಬಿರಾದಾರ್, ಡಿ. ಲಕ್ಷ್ಮಣನಾಯಕ್, ಶಾಂತಕುಮಾರ್, ಜಂಗ್ಲಿ ಪ್ರಸನ್ನ, ಕಿಟ್ಟಿರಾಜ್, ಎಚ್.ಎನ್. ಸಿದ್ಧಪ್ಪ, ಕೇಶವ ಗೋಪಾಲ್, ಚಿದಾನಂದ, ಸುದರ್ಶನ್, ಎಚ್.ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಸಮಾಧಿಗೆ ನಮನ: ಪಾರ್ವತಮ್ಮ ರಾಜ್‌ಕುಮಾರ್‌, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ರಾಜ್‌ ಸಹೋದರಿ ನಾಗಮ್ಮ ಅವರು ಸಮಾಧಿಗೆ ಪೂಜೆ ಸಲ್ಲಿಸಿದರು.

ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರಿಂದ ಅಲ್ಲಿ ಕೆಲಕಾಲ ನೂಕು ನುಗ್ಗಲು ಉಂಟಾಯಿತು. ಅನ್ನದಾನ, ರಕ್ತದಾನ, ನೇತ್ರದಾನ ನಡೆದವು.

*
ರಾಜ್‌ಕುಮಾರ್ ಅವರ ನಡೆನುಡಿ, ಆದರ್ಶವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯಕ್ರಮದಲ್ಲಿ ಅವರ ವಿಷಯ ಅಳವಡಿಸಲು ನಿರ್ಧರಿಸಲಾಗಿದೆ.
-ಜಿ.ಪರಮೇಶ್ವರ್‌, ಗೃಹ ಸಚಿವ

*
ಮುಂದಿನ ವರ್ಷದಿಂದ ಚಿತ್ರರಂಗಕ್ಕೆ ರಜೆ ಘೋಷಿಸಿ ಎಲ್ಲರೂ ಒಟ್ಟಾಗಿ ಒಂದೇ ಕಡೆ ಸಾರ್ವಜನಿಕವಾಗಿ ಜಯಂತಿ ಆಚರಿಸಲು ನಿರ್ಧರಿಸಿದ್ದೇವೆ.
-ಸಾ.ರಾ. ಗೋವಿಂದು,
ಅಧ್ಯಕ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.