ADVERTISEMENT

ನೆಫ್ರೋ ಯುರಾಲಜಿ ಸಂಸ್ಥೆ ವಿಸ್ತರಣೆಗೆ ಪ್ರಸ್ತಾವ

₹16 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ

ಎನ್.ನವೀನ್ ಕುಮಾರ್
Published 30 ಡಿಸೆಂಬರ್ 2015, 19:30 IST
Last Updated 30 ಡಿಸೆಂಬರ್ 2015, 19:30 IST

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆ ಆವರಣದ ನೆಫ್ರೋ ಯುರಾಲಜಿ ಸಂಸ್ಥೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

1,289 ಚದರ ಮೀಟರ್ ವಿಸ್ತೀರ್ಣದ ಕಟ್ಟಡವು ಸುಮಾರು ₹16 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಇದಕ್ಕೆಂದು ₹6 ಕೋಟಿಯನ್ನು ಸಂಸ್ಥೆ ಮೀಸಲಿಟ್ಟಿದೆ. ಕಟ್ಟಡದ ವಿನ್ಯಾಸ, ನೀಲನಕ್ಷೆ ಸಿದ್ಧಗೊಂಡಿದೆ.

ಹೊಸ ಕಟ್ಟಡದಲ್ಲಿ 45 ಡಯಾಲಿಸಿಸ್‌ ಯಂತ್ರಗಳನ್ನು ಒಳಗೊಂಡ ಘಟಕ, 60 ಹಾಸಿಗೆಗಳ ವಾರ್ಡ್ ರೂಂ, ಹೊರ ರೋಗಿಗಳ ವಿಭಾಗ(ಒಪಿಡಿ) ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತದೆ.

ಈ ಮೊದಲು ಜಯದೇವ ಆಸ್ಪತ್ರೆಗಾಗಿ ಬಳಕೆ ಮಾಡುತ್ತಿದ್ದ ಕಟ್ಟಡವನ್ನು ನೆಫ್ರೋ ಯುರಾಲಜಿ ಸಂಸ್ಥೆಯು ನವೀಕರಿಸಿ ಒಪಿಡಿಯನ್ನು ತೆರೆದಿತ್ತು. ಅದರಲ್ಲೇ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೊಸ ಕಟ್ಟಡ ನಿರ್ಮಾಣಗೊಂಡ ಬಳಿಕ ಒಪಿಡಿಯನ್ನು ಅಲ್ಲಿಗೆ ಸ್ಥಳಾಂತರಿಸಲಾಗುತ್ತದೆ.

‘ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರನ್ನು ಭೇಟಿಯಾಗಿ ಯೋಜನೆಯ ರೂಪುರೇಷೆಗಳ ಬಗ್ಗೆ ವಿವರಿಸಿದ್ದೇನೆ. ಅವರು ಯೋಜನೆಗೆ ಒಪ್ಪಿಗೆ ಸೂಚಿಸಿ ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಿದ್ದಾರೆ. ಮುಖ್ಯಮಂತ್ರಿಗಳು ನೆಫ್ರೋ ಯುರಾಲಜಿ ಸಂಸ್ಥೆಯ ಅಧ್ಯಕ್ಷರಾಗಿರುವುದರಿಂದ ಅವರ ಅನುಮತಿ ಅಗತ್ಯವಿದೆ’ ಎಂದು ನೆಫ್ರೋ ಯುರಾಲಜಿ ಸಂಸ್ಥೆ ನಿರ್ದೇಶಕ ಡಾ.ಆರ್‌.ಕೇಶವಮೂರ್ತಿ ಪ್ರಜಾವಾಣಿಗೆ ತಿಳಿಸಿದರು.

‘ಪ್ರಸ್ತಾವಕ್ಕೆ ಅನುಮತಿ ದೊರೆತರೆ ಆರು ತಿಂಗಳಲ್ಲಿ ಕಟ್ಟಡ ನಿರ್ಮಾಣವಾಗಲಿದೆ’ ಎಂದು ತಿಳಿಸಿದರು.

‘ಕಟ್ಟಡ ನಿರ್ಮಾಣದ ಮೇಲುಸ್ತುವಾರಿಯನ್ನು ಯಾವ ಇಲಾಖೆ ನೀಡಬೇಕು ಎಂಬುದು ನಿರ್ಧಾರವಾಗಬೇಕಿದೆ. ಲೋಕೋಪಯೋಗಿ ಇಲಾಖೆ, ಭೂಸೇನೆ ಅಥವಾ ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಯೋಜನೆ(ಕೆಎಚ್‌ಎಸ್‌ಡಿಪಿ) ಯಲ್ಲಿ ಯಾವ ಸಂಸ್ಥೆಗೆ ನೀಡಬೇಕೆಂಬುದನ್ನು ಸಿಎಂ ನಿರ್ಧರಿಸಲಿದ್ದಾರೆ. ಬಳಿಕ ಜಾಗತಿಕ ಟೆಂಡರ್‌ ಕರೆಯಲಾಗುತ್ತದೆ’ ಎಂದು ಕೇಶವಮೂರ್ತಿ ಹೇಳಿದರು.

ನೆಫ್ರೋಲಜಿ ಹಾಗೂ ಯುರಾಲಜಿಯ ಹೊರರೋಗಿಗಳ ವಿಭಾಗಕ್ಕೆ ನಿತ್ಯ 300ಕ್ಕೂ ಹೆಚ್ಚಿನ ಹೊಸ ರೋಗಿಗಳು ಬರುತ್ತಾರೆ. ಮೂತ್ರಪಿಂಡದ ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವವರು ಚಿಕಿತ್ಸೆ ಪಡೆಯುತ್ತಾರೆ. ಆದರೆ, ಹೆಚ್ಚಿನ ರೋಗಿಗಳಿಂದಾಗಿ ಹೊರರೋಗಿಗಳ ವಿಭಾಗ ಕಿಷ್ಕಿಂಧೆಯಂತಾಗುತ್ತದೆ.

ಸದ್ಯ ಸಂಸ್ಥೆಯ ಡಯಾಲಿಸಿಸ್‌ ಘಟಕದಲ್ಲಿ 25 ಯಂತ್ರಗಳಿವೆ. ಒಬ್ಬ ರೋಗಿಗೆ ಕನಿಷ್ಠ 4 ಗಂಟೆವರೆಗೆ ಡಯಾಲಿಸಿಸ್‌ ಮಾಡಬೇಕಿದ್ದು, ದಿನಕ್ಕೆ ಮೂರು ಪಾಳಿಯಲ್ಲಿ 65ರಿಂದ 75 ಮಂದಿಗೆ ಡಯಾಲಿಸಿಸ್‌ ಮಾಡಲಾಗುತ್ತಿದೆ. ಆದರೆ ನಿತ್ಯ 100ರಿಂದ 150 ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರು ಆಸ್ಪತ್ರೆಗೆ ಬರುತ್ತಾರೆ. ಹೀಗಾಗಿ ತುರ್ತು ಇದ್ದವರಿಗೆ ಆದ್ಯತೆ ಮೇರೆಗೆ ಡಯಾಲಿಸಿಸ್‌ ಮಾಡಲಾಗುತ್ತಿದೆ.ಹೊಸ ಕಟ್ಟಡದಲ್ಲಿ ನಿತ್ಯ ಹೆಚ್ಚುವರಿಯಾಗಿ 120ರಿಂದ 135 ಮಂದಿಗೆ ಡಯಾಲಿಸಿಸ್‌ ಮಾಡಬಹುದಾಗಿದೆ. ಇದರಿಂದ ರೋಗಿಗಳ ಹೊರೆಯನ್ನು ತಗ್ಗಿಸಬಹುದಾಗಿದೆ.

ಸಿಬ್ಬಂದಿ ಕೊರತೆ ಇಲ್ಲ: ‘ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಚಿಕಿತ್ಸೆ ನೀಡಲು ಕಟ್ಟಡ, ಡಯಾಲಿಸಿಸ್‌ ಯಂತ್ರ ಸೇರಿದಂತೆ ಮೂಲಸೌಕರ್ಯದ ಕೊರತೆ ಇತ್ತು. ಹೊಸ ಕಟ್ಟಡದಿಂದ ಈ ಕೊರತೆಯನ್ನು ನೀಗಿಸಿಕೊಳ್ಳಬಹುದು’ ಎನ್ನುವ ಕೇಶವಮೂರ್ತಿ ಅವರು, ‘ಈಗ ನರ್ಸ್‌ಗಳ ನೇಮಕಾತಿ ನಡೆಯುತ್ತಿದ್ದು, 56 ಮಂದಿ ನೇಮಕಗೊಳ್ಳಲಿದ್ದಾರೆ. ಜೊತೆಗೆ ಆರು ತಜ್ಞ ವೈದ್ಯರ ನೇಮಕಕ್ಕೆ ಶೀಘ್ರ ಸಂದರ್ಶನ ಕರೆಯಲಾಗುವುದು. ಸಂಸ್ಥೆಯ ತರಬೇತಿ ಕೋರ್ಸ್‌ನ ವಿದ್ಯಾರ್ಥಿಗಳು ಲಭ್ಯವಿರುವುದರಿಂದ ಸಿಬ್ಬಂದಿ ಕೊರತೆ ಎದುರಾಗುವುದಿಲ್ಲ’ ಎಂದು ಹೇಳಿದರು.

ತಾಲ್ಲೂಕು ಆಸ್ಪತ್ರೆಗಳಲ್ಲಿ ಘಟಕ: ‘ತಾಲ್ಲೂಕು ಆಸ್ಪತ್ರೆಗಳಲ್ಲೂ ಡಯಾಲಿಸಿಸ್‌ ಘಟಕ ಸ್ಥಾಪಿಸಬೇಕೆಂಬ ಪ್ರಸ್ತಾವ ಸರ್ಕಾರದ ಮಟ್ಟದಲ್ಲಿದೆ. ಇದಕ್ಕೆ  ಖಾಸಗಿ ಸಹಭಾಗಿತ್ವ ಪಡೆಯುವ ಉದ್ದೇಶವೂ ಇದೆ. ಆದರೆ ಇದಕ್ಕಿನ್ನೂ ಒಪ್ಪಿಗೆ ದೊರೆತಿಲ್ಲ’ ಎಂದು ಕೇಶವಮೂರ್ತಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.