ADVERTISEMENT

ನೇಣಿಗೆ ಶರಣಾದ ವಿದ್ಯಾರ್ಥಿನಿ

ನಗ್ನ ಚಿತ್ರ ತೆಗೆದದ್ದಕ್ಕೆ ಬೇಸರಗೊಂಡು ಬಾಲಕಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 20:22 IST
Last Updated 5 ಅಕ್ಟೋಬರ್ 2015, 20:22 IST

ಬೆಂಗಳೂರು: ಚಿಕ್ಕಜಾಲ ಸಮೀಪದ ಸುಭಾಷ್‌ನಗರದಲ್ಲಿ ಸಂಗೀತಾ ಎಂಬ 9ನೇ ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ.

ಸುಭಾಷ್‌ನಗರದ ಕಾಳಿಯಪ್ಪ ಎಂಬುವರ ಪುತ್ರಿ ಸಂಗೀತಾ ಚಿಕ್ಕಜಾಲದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಳು. ಕಾಳಿಯಪ್ಪ ಬಂಡೆ ಕೆಲಸ ಮಾಡುತ್ತಾರೆ.

ಮಧ್ಯಾಹ್ನ 1.30ರ ಸುಮಾರಿಗೆ ಸಂಗೀತಾ ನೇಣು ಹಾಕಿಕೊಂಡಿದ್ದಾಳೆ. ಆಕೆಯ ಪೋಷಕರು ಊಟಕ್ಕೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನ ಸಂಗೀತಾ ಪತ್ರ ಬರೆದಿಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

‘ನನ್ನ ಸಾವಿಗೆ ಕೃಷ್ಣಮೂರ್ತಿ, ಮೋಹನ್‌ ಮತ್ತು ಆತನ ತಾಯಿ ಹಾಗೂ ಅವರ ಸ್ನೇಹಿತರು ಕಾರಣ. ಮಧ್ಯಾಹ್ನ ಶಾಲೆಯಿಂದ ಬರುವಾಗ ನೆರೆಮನೆಯ ಕೃಷ್ಣಮೂರ್ತಿ, ಅವರ ತಮ್ಮ ಮೋಹನ್‌,  ಅವರ ಸ್ನೇಹಿತರು ನನ್ನನ್ನು ಎಳೆದೊಯ್ದು ಬಟ್ಟೆ ಬಿಚ್ಚಿದರು. ನಂತರ ಮೊಬೈಲ್‌ನಿಂದ ಛಾಯಾಚಿತ್ರ ತೆಗೆದರು. ನನಗೆ ಹಾಗೂ ನನ್ನ ಕುಟುಂಬಕ್ಕೆ ನ್ಯಾಯ ಸಿಗಬೇಕು’ ಎಂದು ಸಂಗೀತಾ ಪತ್ರ ಬರೆದಿಟ್ಟಿದ್ದಾಳೆ. ಘಟನೆ ಸಂಬಂಧ ಪೊಲೀಸರು ಕೃಷ್ಣಮೂರ್ತಿ ಮತ್ತು ಮೋಹನರನ್ನು  ಬಂಧಿಸಿದ್ದಾರೆ.

ಕೌಟುಂಬಿಕ ಕಲಹ:  ಕಾಳಿಯಪ್ಪ ಅವರ ಮನೆ ಪಕ್ಕ ಕೃಷ್ಣಮೂರ್ತಿ ಅವರ ಮನೆ ಇದೆ. ಈ ಕುಟುಂಬಗಳ ನಡುವೆ ಅ.3ರಂದು ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ಆಗ ಪೊಲೀಸರು ಎರಡೂ ಮನೆಯವರನ್ನು ಕರೆಸಿ ರಾಜಿ ಮಾಡಿಸಿದ್ದರು.

‘ಭಾನುವಾರ ರಾತ್ರಿ ಕಾಳಿಯಪ್ಪ ಅವರ ಮನೆಗೆ ನುಗ್ಗಿದ ಕೃಷ್ಣಮೂರ್ತಿ ಮತ್ತು ಮೋಹನ್ ಸಂಗೀತಾಳ ಸಹೋದರಿ ಭಾಗ್ಯಲಕ್ಷ್ಮಿ ಅವರ ಮೇಲೆ ಹಲ್ಲೆ ನಡೆಸಿದ್ದರು. ಸಂಗೀತಾ, ರಾತ್ರಿ ಸುರಿಯುತ್ತಿದ್ದ ಮಳೆಯಲ್ಲಿಯೇ ಠಾಣೆಗೆ ಹೋಗಿ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸಂಗೀತಾಳ ದೊಡ್ಡಪ್ಪ ಬಸವರಾಜಪ್ಪ ತಿಳಿಸಿದರು.

ದೂರು ನೀಡಿದ ದ್ವೇಷದಿಂದ ಸಂಗೀತಾ ಶಾಲೆಯಿಂದ ಬರುವಾಗ ಕೃಷ್ಣಮೂರ್ತಿ ತಮ್ಮ ಮತ್ತು ಅವರ ಸ್ನೇಹಿತರು ಆಕೆಯ             ಛಾಯಾಚಿತ್ರ ತೆಗೆದು ಅವಮಾನಿಸಿದ್ದಾರೆ. ಹೀಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅವರು ಆರೋಪಿಸಿದರು.

* ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿಟ್ಟ ಸಂಗೀತಾ

* ಕುಟುಂಬಕ್ಕೆ ನ್ಯಾಯ ಸಿಗುವಂತೆ ಆಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT