ADVERTISEMENT

ನೋಟು ಬದಲಾವಣೆ: 7 ಮಂದಿ ಸೆರೆ

ಮಹಿಳೆಗೆ ಸೇರಿದ ಹಣ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 19:43 IST
Last Updated 29 ಏಪ್ರಿಲ್ 2017, 19:43 IST
ನೋಟು ಬದಲಾವಣೆ: 7 ಮಂದಿ ಸೆರೆ
ನೋಟು ಬದಲಾವಣೆ: 7 ಮಂದಿ ಸೆರೆ   

ಬೆಂಗಳೂರು: ನೋಟು ಬದಲಾವಣೆ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಶುಕ್ರವಾರ ರಾತ್ರಿ ಏಳು ಮಂದಿಯನ್ನು ಬಂಧಿಸಿರುವ ಕಬ್ಬನ್‌ಪಾರ್ಕ್ ಪೊಲೀಸರು, ₹ 97 ಲಕ್ಷ ಮೊತ್ತದ ಹಳೆ ನೋಟುಗಳನ್ನು ಜಪ್ತಿ ಮಾಡಿದ್ದಾರೆ.

ಕೇರಳದ ಅಬ್ದುಲ್ ರೆಹಮಾನ್, ಪ್ರದೀಶ್, ಜೆ.ಪಿ.ನಗರದ ಶಿವಪ್ರಸಾದ್, ಬಸವೇಶ್ವರನಗರದ ಶಿವಲಿಂಗಪ್ಪ, ಹೆಸರಘಟ್ಟದ ರವಿಕುಮಾರ್, ಗುಬ್ಬಿ ತಾಲ್ಲೂಕಿನ ಮಂಜುನಾಥ್ ಹಾಗೂ ಬಸವರಾಜು ಎಂಬುವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಗಳಾದ ಬಾಗಲಗುಂಟೆಯ ಸುಧಾ ಹಾಗೂ ಕೇರಳದ ರಾಮದಾಸ್ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

ಸುಧಾ ಅವರು ಮನೆ ಸಮೀಪ ದಿನಸಿ ಅಂಗಡಿ ಇಟ್ಟುಕೊಂಡಿದ್ದಾರೆ. ಜಪ್ತಿಯಾಗಿರುವ ಅಷ್ಟೂ ಹಣ ಅವರಿಗೇ ಸೇರಿದ್ದು. ಇತ್ತೀಚೆಗೆ ರಾಮದಾಸ್‌ನನ್ನು ಸಂಪರ್ಕಿಸಿದ್ದ ಸುಧಾ, ‘ನನ್ನ ಬಳಿ ₹ 1 ಕೋಟಿ ಮೊತ್ತದ ₹ 500 ಹಾಗೂ ₹ 1,000 ಮುಖಬೆಲೆಯ ನೋಟುಗಳಿವೆ.

ಅವುಗಳನ್ನು ಬದಲಾಯಿಸಿಕೊಟ್ಟರೆ, ಶೇ 30ರಷ್ಟು ಕಮಿಷನ್ ಕೊಡುತ್ತೇನೆ’ ಎಂದಿದ್ದರು. ಅದಕ್ಕೆ ಒಪ್ಪಿದ್ದ ರಾಮ ದಾಸ್, ಹಣ ಪಡೆದುಕೊಂಡು ಬರು
ವಂತೆ ರೆಹಮಾನ್ ಹಾಗೂ ಪ್ರದೀಶ್‌ ನನ್ನು ಶುಕ್ರವಾರ ನಗರಕ್ಕೆ ಕಳುಹಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಅಂತೆಯೇ ರಾತ್ರಿ 8 ಗಂಟೆ ಸುಮಾರಿಗೆ ಅವರಿಬ್ಬರೂ ಹೋಂಡಾ ಸಿಟಿ ಕಾರಿನಲ್ಲಿ ಎಂ.ಜಿ.ರಸ್ತೆಗೆ ಬಂದಿದ್ದರು. ಆ ನಂತರ ಸುಧಾ, ಪರಿಚಿತ ಹುಡುಗರ ಮೂಲಕ ಇಂಡಿಕಾ ಕಾರಿನಲ್ಲಿ ಹಣವನ್ನು ಕಳುಹಿಸಿದ್ದರು.

ಈ ಬಗ್ಗೆ ಪೊಲೀಸ್ ಬಾತ್ಮೀದಾರರಿಂದ ಸುಳಿವು ಸಿಕ್ಕಿತು. ಹಣದ ಪೆಟ್ಟಿಗೆಯನ್ನು ಇನ್ನೊಂದು ಕಾರಿಗೆ ಸ್ಥಳಾಂತರಿಸುತ್ತಿದ್ದ  ಸಂದರ್ಭದಲ್ಲಿ ದಾಳಿ ನಡೆಸಿದೆವು ಎಂದು ಪೊಲೀಸರು ಹೇಳಿದರು.

ಹೇಗೋ ದಾಳಿಯ ವಿಷಯ ತಿಳಿದ ಸುಧಾ, ಕುಟುಂಬ ಸದಸ್ಯರ ಜತೆ ನಾಪತ್ತೆಯಾಗಿದ್ದಾರೆ. ಬಂಧಿತರ ವಿಚಾರಣೆಯಿಂದ ರಾಮದಾಸ್‌ನ ಸುಳಿವು ಸಿಕ್ಕಿದೆ. ಆತನ ಬಂಧನಕ್ಕೆ ಒಂದು ತಂಡವನ್ನು ಕೇರಳಕ್ಕೆ ಕಳುಹಿಸಲಾಗಿದೆ. ‘ಎನ್‌ಆರ್‌ಐಗಳ ಮೂಲಕ ಚೆನ್ನೈ ಆರ್‌ಬಿಐ ಕಚೇರಿಯಲ್ಲಿ ಹಣ ಬದಲಾಯಿಸುವ ಯೋಜನೆ ಹೊಂದಿದ್ದೆವು’ ಎಂದು ಆರೋಪಿಗಳು ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.