ADVERTISEMENT

ನ್ಯಾಯದಾನ ವಿಳಂಬ: ಹೆಗ್ಡೆ ಕಳವಳ

​ಪ್ರಜಾವಾಣಿ ವಾರ್ತೆ
Published 22 ಜುಲೈ 2016, 19:30 IST
Last Updated 22 ಜುಲೈ 2016, 19:30 IST
ಎನ್‌. ಸಂತೋಷ್‌ ಹೆಗ್ಡೆ ಹಾಗೂ ಪ್ರಾಧ್ಯಾಪಕ ಡಾ. ಬಿ. ಪಾಂಡುಕುಮಾರ್‌ ಮಾತುಕತೆ ನಡೆಸಿದರು. ಮಹಾರಾಣಿ ಕಾಲೇಜಿನ ಪ್ರಾಂಶುಪಾಲೆ ಡಾ. ಆರ್‌. ಶಾಂತಕುಮಾರಿ, ಡಾ.ಎಚ್‌. ಮಂಗಳಾಂಬ, ಮಿಥಿಕ್‌ ಸೊಸೈಟಿ ಅಧ್ಯಕ್ಷ ಡಾ.ಎಂ.ಕೆ.ಎಲ್‌.ಎನ್‌ ಶಾಸ್ತ್ರಿ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ
ಎನ್‌. ಸಂತೋಷ್‌ ಹೆಗ್ಡೆ ಹಾಗೂ ಪ್ರಾಧ್ಯಾಪಕ ಡಾ. ಬಿ. ಪಾಂಡುಕುಮಾರ್‌ ಮಾತುಕತೆ ನಡೆಸಿದರು. ಮಹಾರಾಣಿ ಕಾಲೇಜಿನ ಪ್ರಾಂಶುಪಾಲೆ ಡಾ. ಆರ್‌. ಶಾಂತಕುಮಾರಿ, ಡಾ.ಎಚ್‌. ಮಂಗಳಾಂಬ, ಮಿಥಿಕ್‌ ಸೊಸೈಟಿ ಅಧ್ಯಕ್ಷ ಡಾ.ಎಂ.ಕೆ.ಎಲ್‌.ಎನ್‌ ಶಾಸ್ತ್ರಿ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದಲ್ಲಿ ನ್ಯಾಯದಾನ ವಿಳಂಬವಾಗುತ್ತಿದೆ. ಮೊದಲ  ಕೋರ್ಟ್‌ನಲ್ಲಿ ಶಿಕ್ಷೆ ಪ್ರಕಟವಾಗುವಾಗ 15–16 ವರ್ಷ ಕಳೆದಿರುತ್ತದೆ’ ಎಂದು ನಿವೃತ್ತ ಲೋಕಾಯುಕ್ತ ಎನ್‌. ಸಂತೋಷ್‌ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.

ಮಿಥಿಕ್‌ ಸೊಸೈಟಿ ಆಶ್ರಯದಲ್ಲಿ ನಗರದ ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಶುಕ್ರವಾರ ನಡೆದ ಎಂ.ವಿ.ಕೃಷ್ಣರಾವ್ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಲಾಲೂಪ್ರಸಾದ್ ಅವರಿಗೆ 10 ವರ್ಷಗಳ ಬಳಿಕ ಶಿಕ್ಷೆಯಾಯಿತು. ಜಯಲಲಿತಾ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗುವಾಗ 15 ವರ್ಷ ಕಳೆದಿತ್ತು. ಸಲ್ಮಾನ್‌ ಖಾನ್‌ ವಿಷಯದಲ್ಲೂ ಇದೇ ರೀತಿ ಆಗಿದೆ. ಯಾರಿಗೂ ಜೈಲಿಗೆ ಹೋಗುವ ಹೆದರಿಕೆ ಇಲ್ಲ’ ಎಂದರು.

‘ಲೋಕಾಯುಕ್ತ ಸಂಸ್ಥೆಗೆ ಬರುವ ಬರುವವರೆಗೆ ನಾನು ಕೂಪ ಮಂಡೂಕವಾಗಿದ್ದೆ. ನನ್ನ ಹಾಗೆ ಎಲ್ಲರೂ ಸುಖವಾಗಿದ್ದಾರೆ ಎಂದು ಭಾವಿಸಿದ್ದೆ. ಸರ್ಕಾರದಿಂದ ಜನರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಗೊತ್ತಿರಲಿಲ್ಲ’ ಎಂದರು.

‘ಸಮಾಜದಲ್ಲಿ ಇವತ್ತು ಶ್ರೀಮಂತಿಕೆ ಹಾಗೂ ಅಧಿಕಾರ ಇದ್ದವರಿಗೆ ಮಾತ್ರ ಗೌರವ ಸಿಗುತ್ತಿದೆ. ಜೈಲಿಗೆ ಹೋಗಿ ಬಂದವರನ್ನು ನಾವು ಸನ್ಮಾನಿಸುತ್ತೇವೆ. ಭ್ರಷ್ಟ ಅಧಿಕಾರಿಗಳ ಬೆಂಬಲಕ್ಕೆ ಸಚಿವರೇ ನಿಲ್ಲುತ್ತಾರೆ. ವ್ಯವಸ್ಥೆ ಹದಗೆಟ್ಟಿರುವುದಕ್ಕೆ ಇದು ಸಾಕ್ಷಿ’ ಎಂದು ವಿಶ್ಲೇಷಿಸಿದರು.

ಭಾರತೀಯ ಮಜ್ದೂರ್ ಸಂಘದ  ಎಚ್.ಮಂಗಳಾಂಬ ಅವರು ‘ಸಂವಿಧಾನ–ಮಹಿಳೆಯ ಸಾಮಾಜಿಕ ನೆಲೆ’ ಕುರಿತು ಮಾತನಾಡಿ, ‘ಮಹಿಳೆಯರಿಗೆ ಮೀಸಲಾತಿಯ ಜತೆಗೆ ಸಮಾನ ಅವಕಾಶ ದೊರಕಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.