ಬೆಂಗಳೂರು: ವ್ಯಕ್ತಿಯೊಬ್ಬ ಪತ್ನಿಯ ಮುಖಕ್ಕೆ ಆ್ಯಸಿಡ್ ಎರಚಿರುವ ಘಟನೆ ವರ್ತೂರು ಸಮೀಪದ ಗಾಂಧಿ ವೃತ್ತದಲ್ಲಿ ಶನಿವಾರ ನಡೆದಿದೆ. ಈ ಸಂಬಂಧ ಆರೋಪಿ ಫೈರೋಜ್ ಖಾನ್ (33) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಉಲ್ಫತ್ ಬಾನು (27) ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಸಂಜೆ ದಂಪತಿ ನಡುವೆ ಜಗಳವಾಗಿದೆ. ಆಗ ಆರೋಪಿ, ಶೌಚಾಲಯ ಶುಚಿಗೊಳಿಸಲು ಬಳಸುವ ಆ್ಯಸಿಡ್ ಅನ್ನು ಪತ್ನಿಯ ಮುಖಕ್ಕೆ ಎರಚಿದ್ದಾನೆ. ಬಾನು ಅವರ ಚೀರಾಟ ಕೇಳಿದ ಸ್ಥಳೀಯರು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಮಿಳುನಾಡು ಮೂಲದ ಫೈರೋಜ್, 12 ವರ್ಷಗಳ ಹಿಂದೆ ಬಾನು ಅವರನ್ನು ವಿವಾಹವಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸೌದಿ ಅರೇಬಿಯಾದಲ್ಲಿ ಕಾರು ಚಾಲಕನಾಗಿದ್ದ ಆತ, ಮೂರು ತಿಂಗಳ ಹಿಂದೆ ಮನೆಗೆ ಹಿಂದಿರುಗಿದ್ದ. ಪತ್ನಿಯ ಶೀಲ ಶಂಕಿಸಿ ಪ್ರತಿದಿನ ಗಲಾಟೆ ಮಾಡುತ್ತಿದ್ದ ಆತ, ಶನಿವಾರ ಸಂಜೆ ಸಹ ಇದೇ ವಿಚಾರವಾಗಿ ಜಗಳ ಆರಂಭಿಸಿದ್ದ. ಆಗ ಮಧ್ಯಪ್ರವೇಶಿಸಿದ್ದ ಸ್ಥಳೀಯರು, ಸಂಧಾನಕ್ಕೆ ಯತ್ನಿಸಿದ್ದರು.
ಆದರೆ, ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಆರೋಪಿ ಆ್ಯಸಿಡ್ ಎರಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾನು ಅವರ ಮುಖ ಹಾಗೂ ಕೈಗೆ ಸುಟ್ಟ ಗಾಯಗಳಾಗಿದೆ. ಘಟನೆ ಸಂಬಂಧ ಬಾನು ಅವರ ದೊಡ್ಡಪ್ಪ ಅಬ್ದುಲ್ ಖಾದರ್ ಅವರು ದೂರು ಕೊಟ್ಟಿದ್ದಾರೆ. ದೂರಿನ ಅನ್ವಯ ಹಲ್ಲೆ (ಐಪಿಸಿ 326) ಹಾಗೂ ಕೊಲೆ ಯತ್ನ (ಐಪಿಸಿ 307) ಆರೋಪದಡಿ ಫೈರೋಜ್ನನ್ನು ಬಂಧಿಸಲಾಗಿದೆ ಎಂದು ವರ್ತೂರು ಪೊಲೀಸರು ತಿಳಿಸಿದ್ದಾರೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.