ADVERTISEMENT

ಪದ್ಮಪ್ರಸಾದ್‌ಗೆ ಚಾವುಂಡರಾಯ ಪ್ರಶಸ್ತಿ

ಸಂಶೋಧಕ ಎಂ. ಚಿದಾನಂದಮೂರ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 10 ಜುಲೈ 2015, 19:47 IST
Last Updated 10 ಜುಲೈ 2015, 19:47 IST

ಬೆಂಗಳೂರು: ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾಹಿತಿ ಎಸ್‌.ಪಿ. ಪದ್ಮಪ್ರಸಾದ್‌ ಅವರಿಗೆ ಸಂಶೋಧಕ ಎಂ. ಚಿದಾನಂದಮೂರ್ತಿ ಅವರು ‘ಚಾವುಂಡರಾಯ ದತ್ತಿ ಪ್ರಶಸ್ತಿ’ ಪ್ರದಾನ ಮಾಡಿದರು.

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಸ್ಥಾಪಿಸಿರುವ   ಈ ದತ್ತಿ ಪ್ರಶಸ್ತಿಯು ₨30 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಫಲಕ ಒಳಗೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ, ‘ಸರ್ಕಾರದ ಯೋಜನೆಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ವಲಯ ಪ್ರತಿಕ್ರಿಯಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಸಾಹಿತಿಗಳು ಸರ್ಕಾರದ ಯೋಜನೆಗಳ ಬಗ್ಗೆ ಎಚ್ಚರದಿಂದ ಪ್ರತಿಕ್ರಿಯಿಸಿದರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ’ ಎಂದು ಹೇಳಿದರು.

‘ಯೋಜನೆಗಳ ಬಗ್ಗೆ ಚರ್ಚೆ ನಡೆಯುವುದು ಒಳ್ಳೆಯದು. ಅದು ಪರ ಮತ್ತು ವಿರೋಧ ಎರಡರಿಂದ ಕೂಡಿರಲಿ. ಆದರೆ, ಮಾತಿನ ಭರದಲ್ಲಿ ವೈಯಕ್ತಿಕ ಟೀಕೆ, ಅವಹೇಳನ ಆಗಬಾರದು’ ಎಂದು ತಿಳಿಸಿದರು.‘ಚಾವುಂಡರಾಯ ಕನ್ನಡದ ಬಹು ದೊಡ್ಡ ಪರಿಚಾರಕ. ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ’ ಎಂದು ಕೊಂಡಾಡಿದರು.
ಸಂಶೋಧಕ ಎಂ. ಚಿದಾನಂದಮೂರ್ತಿ ಮಾತನಾಡಿ, ‘ಚಾವುಂಡರಾಯ 10ನೇ ಶತಮಾನದ ಶ್ರೇಷ್ಠ ಆಡಳಿತಗಾರ. ಶಸ್ತ್ರ ಹಾಗೂ ಶಾಸ್ತ್ರದ  ಬಗ್ಗೆ ಅಪಾರವಾಗಿ ತಿಳಿದುಕೊಂಡಿದ್ದ’ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ ಎಸ್‌.ಪಿ. ಪದ್ಮಪ್ರಸಾದ್‌, ‘ಕನ್ನಡದ ಶ್ರೇಷ್ಠ ಪ್ರಶಸ್ತಿ ಅನಿರೀಕ್ಷಿತವಾಗಿ ನನಗೆ ಸಿಕ್ಕಿದೆ. ಇದು ನನ್ನ ಬದುಕಿನ ಸಾರ್ಥಕ ಕ್ಷಣಗಳು ಎನಿಸುತ್ತವೆ’ ಎಂದರು. ‘ಮನೆಯ ಹಿರಿಯರಿಂದ ನನ್ನಲ್ಲಿ ಸಾಹಿತ್ಯದ ಅಭಿರುಚಿ ಬೆಳೆಯಿತು. ಸಮಯ ಮತ್ತು ಆರೋಗ್ಯ ನನಗೆ ದೇವರು ಕೊಟ್ಟ ದೊಡ್ಡ ಕೊಡುಗೆ. ಇದರಿಂದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು’ ಎಂದು ಹೇಳಿದರು. ಅಭಿನಂದನ ನುಡಿ ಆಡಿದ ಸಾಹಿತಿ ಎಂ.ಎ. ಜಯಚಂದ್ರ, ‘ಜಾನಪದ ಸಾಹಿತ್ಯ ಮತ್ತು ನಾಟಕ ಕ್ಷೇತ್ರಕ್ಕೆ ಪದ್ಮಪ್ರಸಾದ್‌ ಅವರ ಕೊಡುಗೆ ಅಪಾರ’ ಎಂದು ಬಣ್ಣಿಸಿದರು. ಕರ್ನಾಟಕ ಜೈನ್‌ ಅಸೋಸಿಯೇಷನ್‌ ಅಧ್ಯಕ್ಷ ಎಸ್‌. ಜಿತೇಂದ್ರ ಕುಮಾರ್‌ ಅವರು  ಮಾತನಾಡಿದರು.

ಸರ್ಕಾರದ ಯೋಜನೆಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ವಲಯ ಪ್ರತಿಕ್ರಿಯಿಸುತ್ತಿರುವುದು ಒಳ್ಳೆಯ ಬೆಳವಣಿಗೆ
ಪುಂಡಲೀಕ ಹಾಲಂಬಿ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT