ADVERTISEMENT

‘ಪರಿಣಾಮಕಾರಿ ಜಾರಿಗೆ ಸಹಕಾರ ಅಗತ್ಯ’

ಹೆಣ್ಣು ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆ: ರಾಜ್ಯಮಟ್ಟದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 20:09 IST
Last Updated 26 ಸೆಪ್ಟೆಂಬರ್ 2016, 20:09 IST
ಆರೋಗ್ಯ ಸೇವೆಗಳ ತರಬೇತಿ ಸಂಸ್ಥೆ ನಿರ್ದೇಶಕಿ ಡಾ. ಎ.ಆರ್‌.ಅರುಣಾ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷೆ ಕೃಪಾ ಆಳ್ವ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಾ. ರತನ್‌್ ಕೇಳ್ಕರ್‌, ಆರೋಗ್ಯ ಸೇವೆಗಳ ನಿರ್ದೇಶನಾಲಯದ ನಿರ್ದೇಶಕಿ ಡಾ. ಡಿ.ಎಸ್‌. ರೇಣುಕಾ, ನ್ಯಾಯಾಧೀಶ ಸೆಲ್ವ ಕುಮಾರ್‌ ಹಾಜರಿದ್ದರು            –ಪ್ರಜಾವಾಣಿ ಚಿತ್ರ
ಆರೋಗ್ಯ ಸೇವೆಗಳ ತರಬೇತಿ ಸಂಸ್ಥೆ ನಿರ್ದೇಶಕಿ ಡಾ. ಎ.ಆರ್‌.ಅರುಣಾ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷೆ ಕೃಪಾ ಆಳ್ವ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಾ. ರತನ್‌್ ಕೇಳ್ಕರ್‌, ಆರೋಗ್ಯ ಸೇವೆಗಳ ನಿರ್ದೇಶನಾಲಯದ ನಿರ್ದೇಶಕಿ ಡಾ. ಡಿ.ಎಸ್‌. ರೇಣುಕಾ, ನ್ಯಾಯಾಧೀಶ ಸೆಲ್ವ ಕುಮಾರ್‌ ಹಾಜರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹೆಣ್ಣು ಭ್ರೂಣ ಲಿಂಗ ಪತ್ತೆ ತಡೆ (ಪಿಸಿ ಮತ್ತು ಪಿಎನ್‌ಡಿಟಿ) ಕಾಯ್ದೆ ಬಗ್ಗೆ  ಜನರಲ್ಲಿ ಅರಿವು ಮೂಡಿಸುವ ಮೂಲಕ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು’ ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ. ರತನ್ ಕೇಳ್ಕರ್ ಹೇಳಿದರು.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಆಯೋಜಿಸಿದ್ದ ‘ಗರ್ಭಧಾರಣಾ ಪೂರ್ವ ಮತ್ತು ಪ್ರಸವಪೂರ್ವ ಲಿಂಗ ಆಯ್ಕೆ ನಿಷೇಧ ಅಧಿನಿಯಮ 1994ರ ಕಾಯ್ದೆ’ ಕುರಿತು ಅರಿವು ಮೂಡಿಸುವ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಅಲ್ಲದೆ ಎಲ್ಲಾ ಆಡಳಿತಾಧಿಕಾರಿಗಳಿಗೂ ಆದೇಶ ನೀಡಲಾಗಿದೆ. ಸ್ವಪ್ರೇರಣೆಯಿಂದ ಜನರು ಈ ಕೆಲಸ ಮಾಡಿದ್ದರೆ ‘ಹೆಣ್ಣು ಮಕ್ಕಳನ್ನು ಉಳಿಸಿ–ಹೆಣ್ಣು ಮಕ್ಕಳನ್ನು ಓದಿಸಿ’ ಯೋಜನೆ ಜಾರಿಗೆ ತರುವ ಅವಶ್ಯಕತೆ ಇರುತ್ತಿರಲಿಲ್ಲ’ ಎಂದು ಹೇಳಿದರು.   

ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಅವರು ಮಾತನಾಡಿ, ‘ಹೆಣ್ಣು ಮಕ್ಕಳ ಸಂಖ್ಯೆ ಇಳಿಮುಖ ಆಗುತ್ತಿರುವುದರಿಂದ  ದೇಶದಲ್ಲಿ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಹೆಣ್ಣುಗಂಡಿನ ಅನುಪಾತ ಸರಿಯಾಗಿದ್ದರೆ ಸಮಾಜದ ಆರೋಗ್ಯವೂ ಚೆನ್ನಾಗಿರುತ್ತದೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ಅವರು ಮಾತನಾಡಿ, ‘ಮಾತೃ ಪ್ರಧಾನ ಕುಟುಂಬಗಳನ್ನು ಹೊಂದಿರುವ ದಕ್ಷಿಣ ಕನ್ನಡ, ಉಡುಪಿ ಭಾಗಗಳಲ್ಲೂ ಸಹ ಹೆಣ್ಣಿನ ಸಂಖ್ಯೆ ಹೆಚ್ಚಿಲ್ಲ. ಭ್ರೂಣ ಪತ್ತೆ ಮಧ್ಯಮ ವರ್ಗದಲ್ಲೇ ಹೆಚ್ಚಾಗಿ ನಡೆಯುತ್ತಿದೆ. ಅಂಕಿ ಅಂಶಗಳ ಪ್ರಕಾರ ತಳಹಂತದ ಸಮುದಾಯಗಳಲ್ಲಿ ಗಂಡು ಹೆಣ್ಣಿನ ಅನುಪಾತ ಬಹುತೇಕ ಸಮವಾಗಿದೆ’ ಎಂದು ಹೇಳಿದರು.

ವಿಧಾನಸಭಾ ಸದಸ್ಯೆ ವಿನಿಷಾ ನಿರೊ ಮಾತನಾಡಿ, ‘ಸಮಾಜದಲ್ಲಿ ರೂಪಗೊಂಡಿರುವ ನಂಬಿಕೆ, ಆಚರಣೆಗಳೇ ಹೆಣ್ಣನ್ನು ನಿರಾಕರಿಸಲು ಮುಖ್ಯ ಕಾರಣ.  ಕಡಿಮೆ ಸಾಮಾಜಿಕ ಸ್ಥಾನಮಾನ, ವರದಕ್ಷಿಣೆ ಹಾಗೂ ವಿವಾಹ ವೆಚ್ಚ, ಮೂಢನಂಬಿಕೆಗಳಿಂದ ಜನರು ಹೆಣ್ಣನ್ನು ಜರಿಯುತ್ತಿದ್ದಾರೆ. ಇದು ನಿವಾರಣೆ ಆದರೆ ಹೆಣ್ಣು ಮಕ್ಕಳ ಸಂಖ್ಯೆ ವೃದ್ಧಿ ಆಗುವುದರಲ್ಲಿ ಸಂಶಯವೇ ಇಲ್ಲ’ ಎಂದರು ಹೇಳಿದರು.

ಕಾರ್ಯಕ್ರಮದಲ್ಲಿ ‘ಗರ್ಭಧಾರಣಾ ಪೂರ್ವ ಮತ್ತು ಪ್ರಸವಪೂರ್ವ ಲಿಂಗ ಆಯ್ಕೆ ನಿಷೇಧ ಅಧಿನಿಯಮ 1994ರ ಕಾಯ್ದೆ’ಯ ಕನ್ನಡ ಅವತರಣಿಕೆ ಬಿಡುಗಡೆ ಮಾಡಲಾಯಿತು.

ಅಲ್ಲದೆ ಸ್ಕ್ಯಾನಿಂಗ್‌ ಯಂತ್ರಗಳನ್ನು ತಯಾರಿಸುವ ಐದು ಕಂಪೆನಿಗಳಿಗೆ ಅಧಿಕೃತ ನೋಂದಣಿ ಪತ್ರವನ್ನು ನೀಡಲಾಯಿತು.

ಮದುವೆಗಾಗಿ ಉತ್ತರ ಕರ್ನಾಟಕಕ್ಕೆ ಲಗ್ಗೆ  
‘ಹೆಣ್ಣು ಮಕ್ಕಳ ಕೊರತೆಯಿಂದ ಗುಜ್ಜರ್‌ ಸಮುದಾಯದಲ್ಲಿ ಮದುವೆಗಳೇ ಆಗುತ್ತಿಲ್ಲ ಎಂಬ ಸತ್ಯ ರಾಜಸ್ತಾನ ಪ್ರವಾಸದ ವೇಳೆ ಬೆಳಕಿಗೆ ಬಂತು. ಹುಟ್ಟುವ ಮುನ್ನವೇ ಹೆಣ್ಣು ಭ್ರೂಣವನ್ನು ಕೊಲ್ಲುತ್ತಿರುವುದರಿಂದ ಅಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ತೀರ ಕಡಿಮೆಯಾಗಿದೆ. ದಿಗ್ಭ್ರಮೆ ತರಿಸುವ ವಿಷಯವೆಂದರೆ ಆ ಸಮುದಾಯ ಉತ್ತರ ಕರ್ನಾಟಕದಲ್ಲಿನ ಬಡತನ, ಅನಕ್ಷರತೆಯನ್ನು ಬಳಸಿಕೊಂಡು 10–15 ವರ್ಷದ ಬಾಲಕಿಯರನ್ನು ₹ 10 ಸಾವಿರಕ್ಕೆ ಖರೀದಿಸಿ ಕರೆದೊಯ್ಯುವ ಪರಿಪಾಠ ಬೆಳೆಸಿಕೊಂಡಿದೆ’ ಎಂದು ಕೃಪಾ ಆಳ್ವ ವಿವರಿಸಿದರು.

ಮುಖ್ಯಾಂಶಗಳು
* ಅತ್ಯಾಚಾರ, ದೌರ್ಜನ್ಯ ಪ್ರಕರಣಗಳ ಹೆಚ್ಚಳ

* ಕರ್ನಾಟಕದಲ್ಲಿ ಶೇ 50ಕ್ಕಿಂತ ಹೆಚ್ಚು ಬಾಲ್ಯವಿವಾಹ
* ದ. ಕನ್ನಡ, ಉಡುಪಿಯಲ್ಲಿ  ಹೆಣ್ಣಿನ ಸಂಖ್ಯೆ ಹೆಚ್ಚಿಲ್ಲ

* ಸಾಕ್ಷ್ಯ ಸಿಗದೆ ಭ್ರೂಣ ಪತ್ತೆ ಮಾಡುವ ಸ್ಕ್ಯಾನಿಂಗ್‌ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಅದಕ್ಕಾಗಿ ಕುಟುಕು ಕಾರ್ಯಾಚರಣೆ ಕೈಗೊಳ್ಳಲು ನಿರ್ಧರಿಸಿದ್ದೇವೆ
-ಡಾ. ಡಿ.ಎಸ್‌. ರೇಣುಕಾ
ಅಧ್ಯಕ್ಷೆ, ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.