ADVERTISEMENT

ಪರಿಸರ ನಾಶ: ಹಸಿರು ಪೀಠಕ್ಕೆ

ಬೇಲೆಕೇರಿ ಬಂದರಿಗೆ ಅದಿರು ಸಾಗಣೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2014, 20:24 IST
Last Updated 30 ಜುಲೈ 2014, 20:24 IST

ಬೆಂಗಳೂರು: ‘ಬೇಲೆಕೇರಿ ಬಂದರಿಗೆ ಅದಿರು ಸಾಗಿಸುವ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ ನಾಶ ಮಾಡ­­ಲಾಗಿದೆ’ ಎಂದು ಆರೋಪಿಸಿ ಸಲ್ಲಿಸ­ಲಾಗಿದ್ದ ಸಾವರ್ಜನಿಕ ಹಿತಾಸಕ್ತಿ ಅರ್ಜಿ­ಯನ್ನು ಹೈಕೋರ್ಟ್‌ ಮಂಗ­ಳ­­ವಾರ ಸುಪ್ರೀಂಕೋರ್ಟ್‌ಗೆ
ವರ್ಗಾ­ಯಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿ ಎನ್‌.­ಕುಮಾರ್‌ ಹಾಗು ಬಿ.ಮನೋಹರ್‌ ಅವರಿದ್ದ ವಿಭಾಗೀಯ ಪೀಠವು, ‘ಪ್ರಕ­ರ­ಣ­ದಲ್ಲಿ ಅರ್ಜಿದಾರರು ಕೋರಿರುವ ಎರಡು ಕೋರಿಕೆಗಳ ವಿಚಾರಣೆ ನಡೆ­ಸಲು ಸುಪ್ರೀಂ ಕೋರ್ಟ್‌ಗೆ ಮಾತ್ರವೇ ಅಧಿಕಾರ ಇರುವುದರಿಂದ ಈ ಅರ್ಜಿ­ಯನ್ನು ಸುಪ್ರೀಂ ಕೋರ್ಟಿನ ಹಸಿರು ಪೀಠಕ್ಕೆ ವರ್ಗಾಯಿಸುವುದು ಸೂಕ್ತ’ ಎಂಬ ನಿರ್ಧಾರವನ್ನು ಪ್ರಕಟಿಸಿತು.
ಉತ್ತರ ಕನ್ನಡ ಜಿಲ್ಲಾ ನಾಗರಿಕರ ಹಿತರಕ್ಷಣಾ ವೇದಿಕೆಯು 2008ರಲ್ಲಿ ಹೈಕೋರ್ಟಿನಲ್ಲಿ ಈ ಅರ್ಜಿಯನ್ನು ಸಲ್ಲಿಸಿತ್ತು. ಅರ್ಜಿಯಲ್ಲಿ ಒಟ್ಟು ಒಂಭತ್ತು  ಅಂಶ­ಗಳ ಕುರಿತಂತೆ ಪರಿಸರಕ್ಕೆ ಉಂಟಾಗಿರುವ ಹಾನಿ, ಅತಿಕ್ರಮಣ ಮತ್ತು ಕಾನೂನು ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗಿತ್ತು. ಈ 9 ಅಂಶಗಳಲ್ಲಿ ಹೈಕೋರ್ಟ್‌ ಏಳು ಅಂಶಗಳ ಕುರಿತಂತೆ ವಿಚಾರಣೆಯನ್ನು ಮುಕ್ತಾಯ­ಗೊಳಿಸಿತ್ತು.

ಆದರೆ, ಇನ್ನುಳಿದ  ಎರಡು ಅಂಶಗಳನ್ನು ವಿಲೇವಾರಿ ಈ ಕೋರ್ಟಿನ ವ್ಯಾಪ್ತಿಗೆ ಮೀರಿದ್ದು ಎಂದು ಪೀಠವು ಅಭಿಪ್ರಾಯಪಟ್ಟಿತು. ಈ ಕಾರಣ­ದಿಂದಾಗಿಯೇ ಅರ್ಜಿಯನ್ನು ಸುಪ್ರೀಂ ಕೋರ್ಟಿನ ಹಸಿರು ಪೀಠಕ್ಕೆ ವರ್ಗಾಯಿಸುವ ನಿರ್ಧಾರವನ್ನು ಪ್ರಕಟಿಸಿತು.
‘ಅದಿರು ಸಾಗಣೆದಾರರು ಬೇಲೆಕೇರಿ ಬಂದರಿನ ಸಮುದ್ರದಲ್ಲಿ ಸುಮಾರು 35 ಎಕರೆಯಷ್ಟು ಪ್ರದೇಶವನ್ನು ಅತಿಕ್ರಮಿಸಿದ್ದಾರೆ. ಈ ಪ್ರದೇಶದಲ್ಲಿ ಅದಿರು ಸಾಗಣೆಯಿಂದ ಉಂಟಾಗಿರುವ ಹಾನಿ ಅಪಾರ. ಆದ್ದರಿಂದ ಇಲ್ಲಿ ಅದಿರು ಸಾಗಣೆಗೂ ಮುನ್ನ ಇದ್ದ ಪರಿಸರವನ್ನು ಯಾರು ಹಾಳು ಮಾಡಿದ್ದಾರೋ ಅವರೇ ಪುನರ್‌ ನಿರ್ಮಿಸಿಕೊಡಬೇಕು’ ಎಂಬ ಅಂಶಗಳನ್ನು ಸುಪ್ರೀಂ ಕೋರ್ಟ್‌ನ ಹಸಿರು ಪೀಠ ವಿಚಾರಣೆ ನಡೆಸಲಿದೆ.

ಅರ್ಜಿದಾರರಲ್ಲಿ ಒಬ್ಬರಾದ ಬೇಲೆಕೇರಿ ನಿವಾಸಿ ಡಾ.ಸೈಯ್ಯದ್‌ ಮುರ್ತಜಾ ಮೌಜಂ ಷಾ ಎಂಬುವವರು ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಸುಪ್ರೀಂ ಕೋರ್ಟಿಗೆ ಪತ್ರವೊಂದನ್ನು ಬರೆದಿದ್ದರು. ‘ಈ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ನಮಗೆ ನ್ಯಾಯ ಸಿಗುವ ಸಾಧ್ಯತೆಗಳು ಕಡಿಮೆ. ಹಾಗಾಗಿ ಇದರ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿಯೇ ನಡೆಯಬೇಕು’ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದರು. ಈ ಕಾರಣದಿಂದಾಗಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿದ್ದ ವಿಭಾಗೀಯ ಪೀಠವು ಇದನ್ನು ಮತ್ತೊಂದು ವಿಭಾಗೀಯ ಪೀಠಕ್ಕೆ ವರ್ಗಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.